ಚಿಲಿಯ ರೋಮನ್ ಕೆಥೊಲಿಕ್ ಚರ್ಚ್‌ನಲ್ಲಿ ಲೈಂಗಿಕ ದೌರ್ಜನ್ಯ: ಕ್ಷಮೆ ಕೋರಿದ ಪೋಪ್

ಸಾಂಟಿಯಾಗೊ (ಚಿಲಿ), ಜ. 17: ಚಿಲಿಯ ರೋಮನ್ ಕೆಥೊಲಿಕ್ ಚರ್ಚ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಪ್ ಫ್ರಾನ್ಸಿಸ್ ಮಂಗಳವಾರ ‘ನೋವು ಮತ್ತು ಅವಮಾನ’ವನ್ನು ವ್ಯಕ್ತಪಡಿಸಿದ್ದಾರೆ. ಚರ್ಚ್‌ನ ವಿಶ್ವಾಸಾರ್ಹತೆಗೆ ಧಕ್ಕೆಯುಂಟುಮಾಡಿದ ಹಾಗೂ ಸುಧಾರಣೆಗಳ ಬಗ್ಗೆ ಅಪನಂಬಿಕೆ ಹುಟ್ಟಿಸಿದ ಈ ಬಿಕ್ಕಟ್ಟಿಗಾಗಿ ಕ್ಷಮಿಸುವಂತೆ ಅವರು ಕೋರಿದ್ದಾರೆ.
ಕಳೆದ ವಾರ ಚಿಲಿಯಲ್ಲಿ ಕನಿಷ್ಠ 8 ಕೆಥೊಲಿಕ್ ಚರ್ಚ್‌ಗಳ ಮೇಲೆ ದಾಳಿ ನಡೆದ ಬಳಿಕ ಚಿಲಿ ಪ್ರವಾಸದಲ್ಲಿರುವ ಪೋಪ್ ಈ ಮಾತುಗಳನ್ನು ಹೇಳಿದ್ದಾರೆ.
ಚಿಲಿ ರಾಜಧಾನಿ ಸಾಂಟಿಯಾಗೊದಲ್ಲಿ ಮಂಗಳವಾರ ನಡೆದ ಸುಮಾರು 4 ಲಕ್ಷ ಜನರ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಪೋಪ್ ಮಾತನಾಡಿದರು.
ಪೋಪ್‌ರ ಸಭೆಗೆ ಹೋಗಲು ಪ್ರಯತ್ನಿಸಿದ ಸುಮಾರು 200 ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದರು.
ಚಿಲಿಯ ಧರ್ಮಗುರು ಫಾದರ್ ಫೆರ್ನಾಂಡೊ ಕರಡಿಮ ಹಲವಾರು ವರ್ಷಗಳ ಅವಧಿಯಲ್ಲಿ ಹದಿಹರಯದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು 2011ರಲ್ಲಿ ವ್ಯಾಟಿಕನ್ ನಡೆಸಿದ ತನಿಖೆಯಲ್ಲಿ ದೃಢಪಟ್ಟಿತ್ತು. ತನ್ನ ಮೇಲಿನ ಆರೋಪಗಳನ್ನು ಕರಡಿಮ ನಿರಾಕರಿಸಿದ್ದಾರೆ.
ಅದೇ ವೇಳೆ, 2015ರಲ್ಲಿ ಒಸೊರ್ನೊ ಡಯಾಸಿಸ್‌ನ ಮುಖ್ಯಸ್ಥರಾಗಿ ಪೋಪ್‌ರಿಂದ ನೇಮಿಸಲ್ಪಟ್ಟಿರುವ ಬಿಶಪ್ ಜುವಾನ್ ಬರೊಸ್ ಫಾದರ್ ಫೆರ್ನಾಂಡೊರನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.







