ಜ.19 ರಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ
ಲಾಲ್‌ಬಾಗ್‌ನಲ್ಲಿ ಗಮನ ಸೆಳೆಯಲಿರುವ ಗೊಮ್ಮಟೇಶ್ವರ

ಬೆಂಗಳೂರು, ಜ.17: ಗಣರಾಜೋತ್ಸವದ ಫಲಪುಷ್ಪ ಪ್ರದರ್ಶನ ಜ.19 ರಿಂದ 28 ರವರೆಗೆ ನಗರದ ಲಾಲ್‌ಬಾಗ್‌ನಲ್ಲಿ ನಡೆಯಲಿದ್ದು, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕವನ್ನು ಈ ಬಾರಿ ಇಲ್ಲಿಂದಲೇ ಕಣ್ತುಂಬಿಕೊಳ್ಳಬಹುದಾಗಿದೆ.
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅದರಂತೆ ಈ ಬಾರಿ 88ನೆ ಮಹಾಮಸ್ತಕಾಭಿಷೇಕ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ತಯಾರಿ ನಡೆಯುತ್ತಿದೆ. ಅದರ ಭಾಗವಾಗಿ ಈ ಬಾರಿ ಲಾಲ್‌ಬಾಗ್‌ನಲ್ಲಿ ಮಹಾಮಸ್ತಕಾಭಿಷೇಕದ ಪರಿಕಲ್ಪನೆಯಡಿ ಗೊಮ್ಮಟೇಶ್ವರ ಮೂರ್ತಿ ಮತ್ತು ಶ್ರವಣಬೆಳಗೊಳದ ಚಿತ್ರಣವನ್ನು ನಿರ್ಮಿಸಲಾಗುತ್ತಿದೆ. ಪ್ರದರ್ಶನಕ್ಕಾಗಿ 1.63 ಕೋಟಿ ಖರ್ಚು ಮಾಡಲಾಗುತ್ತಿದೆ. ಸುಮಾರು 5 ಲಕ್ಷ ಮಂದಿಯನ್ನು ನಿರೀಕ್ಷಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್ ಚಂದ್ರ ರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಫಲಪುಷ್ಪ ಪ್ರದರ್ಶನವನ್ನು ಜ.19ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಯಲ್ಲಿ ಮಧ್ಯಾಹ್ನ 12ಕ್ಕೆ ಪ್ರದರ್ಶನ ಉದ್ಘಾಟಿಸಲಿದ್ದು, ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ್, ಪ್ರೊ.ಹಂಪನಾಗರಾಜಯ್ಯ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರದರ್ಶನದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಲಾಲ್‌ಬಾಗ್‌ನ ವಾಹನಗಳ ನಿಲುಗಡೆಗೆ ಲಾಲ್‌ಬಾಗ್‌ನಲ್ಲಿ ಅವಕಾಶ ನೀಡುತ್ತಿಲ್ಲ. ಬದಲಿಗೆ ಶಾಂತಿನಗರ ಬಸ್ ನಿಲ್ದಾಣ ಹಾಗೂ ಜೆ.ಸಿ.ನಗರದ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ತಮ್ಮ ವಾಹನಗಳ ನಿಲುಗಡೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಡಬ್ಬಲ್‌ರೋಡ್ ಪ್ರವೇಶ ದ್ವಾರದಿಂದ ಶಾಲಾ ಮಕ್ಕಳ ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಗಾಜಿನ ಮನೆಯಲ್ಲಿ ಶ್ರವಣಬೆಳಗೊಳ: ಶ್ರವಣಬೆಳಗೊಳದ ಭವ್ಯ ಇಂದಗ್ರಿರಿ ಬೆಟ್ಟ ಹಾಗೂ ಶಾಂತಿಧೂತ ಗೊಮ್ಮಟ ಮೂರ್ತಿಯನ್ನು ಅನಾವರಣಗೊಳಿಸಲಾಗುವುದು. ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ವೀಕ್ಷಕರಿಗೆ ಶ್ರವಣಬೆಳಗೊಳವನ್ನು ಹತ್ತಿರದಿಂದ ವೀಕ್ಷಿಸಿದಾಗ ಸಿಗುವ ಪ್ರಾಕೃತಿಕ ಅನುಭವ ದೊರೆಯಲಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದರು.
ಗಾಜಿನ ಮನೆಯ ಮಧ್ಯಭಾಗದಲ್ಲಿ 60x40 ಅಡಿ ವಿಸ್ತೀರ್ಣದಲ್ಲಿ ಹಾಗೂ 30 ಅಡಿ ಎತ್ತರಕ್ಕೆ ಶ್ರವಣ ಬೆಳಗೊಳದ ಇಂದ್ರಗಿರಿ ಮೈದಳೆದು ನಿಲ್ಲಲಿದೆ. ಗಿರಿಯ ಮೇಲೆ ವಿರಾಜಮಾನವಾಗಿರುವ 15 ಅಡಿ ಎತ್ತರದ ಬಾಹುಬಲಿಯ ಪ್ರಧಾನ ಪುತ್ಥಳಿ, ಗೊಮ್ಮಟವನ್ನು ಸುತ್ತುವರಿದ ರಕ್ಷಣಾ ಕೋಟೆ, ಕಲ್ಲು, ಬಂಡೆ, ಗಿಡ, ಮರಗಳೊಂದಿಗೆ ಕಂಗೊಳಿಸಲಿದೆ. ಇಂದ್ರಗಿರಿ ಬೆಟ್ಟದಲ್ಲಿರುವ ಪ್ರಾಚೀನ ಶಾಸನಗಳ ಯಥಾವತ್ ದರ್ಶನ ಕೂಡ ದೊರೆಯಲಿದೆ. ಗೊಮ್ಮಟಗಿರಿಯನ್ನು ಸುತ್ತುವರಿಯಲಿರುವ ಆಕರ್ಷಕ ಹೂಕುಂಡಗಳು ನೋಡುಗರ ಗಮನ ಸೆಳೆಯಲಿವೆ.
ಇತರೆ ಆಕರ್ಷಣೆಗಳು: ನೈಸರ್ಗಿಕ ಭೂದೃಶ್ಯ ವಿನ್ಯಾಸದ ಸೊಬಗು, ಬಾಹುಬಲಿಯ ಪಾದಗಳಿಗೆ ಪುಷ್ಪನಮನ, ಮಹಾಮಸ್ತಕಾಭಿಷೇಕ ಮಹೋತ್ಸವ 2018ರ ಲಾಂಛನದ ಪ್ರತಿ ರೂಪ ಅನಾವರಣ, ಭರತ-ಬಾಹುಬಲಿಯ ನಡುವಿನ ಸಂಘರ್ಷದ ಪ್ರತಿರೂಪಗಳ ಅನಾವರಣ, 3 ಅಡಿಯ ಪೀಠದ ಮೇಲೆ ನಿಂತ 11 ಅಡಿ ಎತ್ತರದ ಬಾಹುಬಲಿು ಪ್ರತಿರೂಪ ಅನಾವರಣಗೊಳ್ಳಲಿದೆ.
ಗಾಜಿನ ಮನೆಯಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ, ಬಾಹುಬಲಿಯ ಉಬ್ಬು ಶಿಲ್ಪಗಳು, ಬಾಹುಬಲಿಯ ಬಗೆಗಿನ ಸಂದೇಶ ಹಾಗೂ ಸೂಕ್ತಿಗಳ ಅನಾವರಣ, ವಿದೇಶಿ ಹೂಗಳ ಕಾರುಬಾರು, ಸಿಕ್ಕಿಂ ಮತ್ತು ಡಾರ್ಜಲಿಂಗ್‌ನಿಂದ ಆಗಮಿಸುವ ಶೀತ ವಲಯದ ಹೂವುಗಳ ಹಿತಾನುಭವ, ಹೂವಿನ ಪಿರಮಿಡ್‌ಗಳು, ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡಲಿರುವ ಫಾಗರ್ಸ್, ಪುಷ್ಪ ಪ್ರದರ್ಶನದಲ್ಲಿ ಬ್ಯಾಂಡ್‌ಗಳ ಹಿಮ್ಮೇಳ ಆಕರ್ಷಣೆಗಳು ಇರಲಿವೆ.
ಗೋಷ್ಠಿಯಲ್ಲಿ ಮೈಸೂರು ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಬಿ.ಆರ್. ವಾಸುದೇವ್, ಖಜಾಂಚಿ ಎಂ. ಕುಪ್ಪುಸ್ವಾಮಿ, ಕಾರ್ಯದರ್ಶಿ ಜಯಲಕ್ಷ್ಮಿ ವರ್ಮ ಮತ್ತಿತರರು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದ ಅಂಗವಾಗಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಜ.19 ಹಾಗೂ 22 ರಿಂದ 25ರವರೆಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬೆ.9 ರಿಂದ ಸಂಜೆ 5 ಗಂಟೆವರೆಗೂ ಬರಬಹುದು.
ಪ್ರವೇಶ ಶುಲ್ಕ
ಸಾಮಾನ್ಯ ದಿನಗಳಲ್ಲಿ ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 60 ರೂ. ಮಕ್ಕಳಿಗೆ 20 ರೂ. ದರ ನಿಗದಿಪಡಿಸಲಾಗಿದೆ. ಹಿಂದೆ ಕ್ರಮವಾಗಿ 50 ಮತ್ತು 10 ರೂ.ಗಳಿತ್ತು. ಈ ಬಾರಿ ಏರಿಕೆ ಮಾಡಲಾಗಿದೆ.ಬುಕ್‌ಮೈ ಶೋನಲ್ಲಿ ಟಿಕೆಟ್
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಮೊದಲ ಬಾರಿಗೆ ಬುಕ್‌ಮೈ ಶೋ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
-ಎಂ.ಆರ್. ಚಂದ್ರಶೇಖರ್, ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ







