ಫೆ.10 ರಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ
ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಪ್ರವಾಸ

ಬೆಂಗಳೂರು, ಜ.17: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.10ರಂದು ರಾಜ್ಯಕ್ಕೆ ಆಗಮಿಸಲಿದ್ದು, ಫೆ.12ರವರೆಗೆ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ವತಿಯಿಂದ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಂತ್ರಗಾರಿಕೆಯನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ರಾಷ್ಟ್ರಕವಿ ಕುವೆಂಪು ಬಗ್ಗೆ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ನೀಡಿರುವ ಅವಹೇಳನಕಾರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕೇವಲ ಅನಂತ್ ಕುಮಾರ್ ಹೆಗಡೆ ಮಾತಲ್ಲ. ಅದು ಬಿಜೆಪಿಯವರ ಅಜೆಂಡಾವಾಗಿದೆ ಎಂದು ಟೀಕಿಸಿದರು.
ಈಗಾಗಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಅನಂತ್ ಕುಮಾರ್ ಹೆಗಡೆ ಲೋಕಸಭೆಯಲ್ಲಿ ಕ್ಷಮೆ ಕೇಳಿದ್ದಾರೆ. ಒಬ್ಬ ಕೇಂದ್ರ ಸಚಿವನಾಗಿ ಪದೇ ಪದೇ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಘನತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವೇಣುಗೋಪಾಲ್ ಸಲಹೆ ನೀಡಿದರು.
ಕುವೆಂಪು ಬಗ್ಗೆ ಅವರು ನೀಡಿರುವ ಹೇಳಿಕೆ ಖಂಡನೀಯ. ಸಮಾಜ ಒಡೆಯುವುದೆ ಇವರ ಮತ್ತು ಬಿಜೆಪಿಯ ಕೆಲಸವಾಗಿದೆ. ಇವರಿಗೆ ಜನರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ ಅವರು, ಪ್ರಗತಿಪರ ಮುಖಂಡರ ಯಾವ ಸಭೆಯನ್ನು ನಾವು ಮಾಡಿಲ್ಲ. ಅವರೇ ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಲು ನಮ್ಮನ್ನು ಭೇಟಿ ಮಾಡಿದ್ದರು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅನಂತಕುಮಾರ್ ಹೆಗಡೆ ಅವರ ಬಾಯಿ ಹಾಗೂ ಮನಸು ಕೊಳಕಾಗಿದೆ. ಇಂತಹ ಕೊಳಕು ಮನುಷ್ಯ ದೇಶದ ಮಂತ್ರಿಯಾಗಿದ್ದೆ ದುರಂತ ಎಂದರು.
ಬಿಜೆಪಿ ನಾಯಕ ಎನ್.ಆರ್.ರಮೇಶ್ ತಮ್ಮ ವಿರುದ್ಧ ಆಧಾರವಿಲ್ಲದೆ ಮಾಡಿರುವ ಆರೋಪಗಳಿಗೆ ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿಯವರು ಇಷ್ಟೊಂದು ಅಧಃಪತನಕ್ಕಿಳಿದಿದ್ದಾರೆಯೇ? ರಾಜಕಾರಣವನ್ನು ಹಾಳು ಮಾಡುವುದು, ಸಮಾಜವನ್ನು ಒಡೆಯುವುದೇ ಇವರ ಕಾಯಕವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.







