ಹಜ್ ಸಬ್ಸಿಡಿ ಓಲೈಕೆಯಾದರೆ ಕುಂಭ ಮೇಳಕ್ಕೆ ನೀಡಿದ 1,150 ಕೋ.ರೂ. ಏನು?: ಒವೈಸಿ ಪ್ರಶ್ನೆ
“ಹಿಂದೂ ಯಾತ್ರಿಗಳ ಸಬ್ಸಿಡಿಯನ್ನು ನಿಲ್ಲಿಸಿ”

ಹೈದರಾಬಾದ್, ಜ.17: ಓಲೈಕೆಯಿಲ್ಲದೆ ಅಲ್ಪಸಂಖ್ಯಾತರ ಸಬಲೀಕರಣ ಸಿದ್ಧಾಂತದ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಹಜ್ ಸಬ್ಸಿಡಿಯನ್ನು ಈ ವರ್ಷದಿಂದ ಸ್ಥಗಿತಗೊಳಿಸಿರುವುದಾಗಿ ಕೇಂದ್ರ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಸರಕಾರವು ಹಿಂದೂ ಓಲೈಕೆ ರಾಜಕೀಯವನ್ನೂ ಬಿಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮೋದಿ ಸರಕಾರಕ್ಕೆ ಸೂಚಿಸಿದ್ದಾರೆ.
ಮೋದಿ ಸರಕಾರವು ಹಿಂದೂ ಯಾತ್ರಿಗಳಿಗೆ ನೀಡುವ ಸಬ್ಸಿಡಿಯನ್ನೂ ಕೈಬಿಡಬೇಕು ಎಂದು ಸವಾಲು ಹಾಕಿರುವ ಒವೈಸಿ, ಸರಕಾರವು ನುಡಿದಂತೆ ನಡೆದು ಮುಸ್ಲಿಂ ಹೆಣ್ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಮುಂದಿನ ಬಜೆಟ್‌ನಲ್ಲಿ 20,000 ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿದರು.
ತಾನು ಹಜ್ ಸಬ್ಸಿಡಿ ನಿಲ್ಲಿಸಿರುವುದನ್ನು ವಿರೋಧಿಸುವುದಿಲ್ಲ. ಅದನ್ನು ಸ್ವಾಗತಿಸುತ್ತೇನೆ. ಆದರೆ ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಒವೈಸಿ ತಿಳಿಸಿದ್ದಾರೆ. ಹಜ್ ಸಬ್ಸಿಡಿಯನ್ನು ನಿಲ್ಲಿಸಿ ಆ ಹಣವನ್ನು ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವಂತೆ ಒವೈಸಿ 2006ರಿಂದಲೂ ಹೇಳುತ್ತಲೇ ಬಂದಿದ್ದಾರೆ. ಹಜ್ ಸಬ್ಸಿಡಿಯಲ್ಲಿ ನೀಡುವುದು ಕೇವಲ 200 ಕೋಟಿ ರೂ. ಬಿಜೆಪಿ ಅದನ್ನು ಓಲೈಕೆ ಎಂದು ಕರೆಯುತ್ತದೆ. “ನಾನು ಬಿಜೆಪಿ, ಪ್ರಧಾನಿ ಮತ್ತು ಆರೆಸ್ಸೆಸ್ ನವರಲ್ಲಿ ಕೇಳುತ್ತೇನೆ ಹಜ್ ಸಬ್ಸಿಡಿ ಓಲೈಕೆಯಾದರೆ ಕುಂಭ ಮೇಳಕ್ಕೆ ನೀಡಿದ ಹಣಕ್ಕೆ ಏನನ್ನಬೇಕು? 2014ರಲ್ಲಿ ಕುಂಭ ಮೇಳ ನಡೆದಾಗ ಸರಕಾರ 1,150 ಕೋಟಿ ರೂ. ಬಿಡುಗಡೆ ಮಾಡಿತ್ತು ಎಂದು ಒವೈಸಿ ತಿಳಿಸಿದ್ದಾರೆ.
ಹಜ್ ಭವನ ಸೇರಿದಂತೆ ಪ್ರತಿಯೊಂದಕ್ಕೂ ಕೇಸರಿ ಬಣ್ಣ ಬಳಿಯುತ್ತಿರುವ ಆದಿತ್ಯನಾಥ್ ಸರಕಾರ ಅಯೋಧ್ಯೆ, ಕಾಶಿ ಮತ್ತು ಮಥುರಾ ಯಾತ್ರಿಗಳಿಗೆ ನೀಡುವ 800 ಕೋಟಿ ರೂ. ಸಬ್ಸಿಡಿ ಮತ್ತು ಮಾನಸಸರೋವರ ಯಾತ್ರಿಗಳಿಗೆ ನೀಡುವ ತಲಾ 1.5 ಲಕ್ಷ ರೂ.ವನ್ನು ನಿಲ್ಲಿಸುವಂತೆ ಬಿಜೆಪಿ ಸೂಚಿಸುತ್ತದೆಯೇ? ಎಂದು ಒವೈಸಿ ಪ್ರಶ್ನಿಸಿದ್ದಾರೆ.
ಹರ್ಯಾಣ ಸರಕಾರವು ಕಳಂಕಿತ ದೇವಮಾನವ ಗುರ್ಮೀತ್ ಸಿಂಗ್ ನ ಡೇರ ಸಚ್ಚಾ ಸೌದಾಕ್ಕೆ ಒಂದು ಕೋಟಿ ರೂ. ಅನುದಾನ ನೀಡಿತ್ತು. ಅದು ಓಲೈಕೆಯಲ್ಲವೇ?, ಮಧ್ಯಪ್ರದೇಶದಲ್ಲಿ ನಡೆದ ಸಿಂಹಸ್ತ ಮಹಾಕುಂಭಕ್ಕೆ ಮೋದಿ ಸರಕಾರ 100 ಕೋಟಿ ರೂ. ನೀಡಿತ್ತು. ಇದು ಓಲೈಕೆಯಲ್ಲವೇ? ಎಂದು ಒವೈಸಿ ಪ್ರಶ್ನಿಸಿದ್ದಾರೆ.
ರಾಜಸ್ಥಾನ ಸರಕಾರವು 2017-18ನೇ ಸಾಲಿನಲ್ಲಿ ದೇವಸ್ಥಾನ ಇಲಾಖೆಗೆ 38.91 ಕೋಟಿ ರೂ. ಬಿಡುಗಡೆ ಮಾಡಿತ್ತು. ಹಿಂದಿನ ಸರಕಾರವು ದೇವಸ್ಥಾನದ ಪುನರ್‌ನಿರ್ಮಾಣ ಮತ್ತು ಪುರೋಹಿತರ ತರಬೇತಿಗಾಗಿ 26 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದು ಮತ ರಾಜಕೀಯವಲ್ಲವೇ ಮತ್ತು ಓಲೈಕೆಯಲ್ಲವೇ? ಎಂದು ಒವೈಸಿ ಕೇಳಿದ್ದಾರೆ.
ಈ ವೇಳೆ ಕಾಂಗ್ರೆಸ್ ಅನ್ನೂ ತರಾಟೆಗೆ ತೆಗೆದುಕೊಂಡ ಒವೈಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದೆ. ಚಾರ್ ಧಾಮ್‌ಗೆ ತೆರಳುವವರಿಗೆ 20,000 ರೂ. ನೀಡುವುದಾಗಿ ಈ ಸರಕಾರ 2015ರಲ್ಲಿ ಘೋಷಿಸಿತ್ತು. ಅವರು ಜನಿವಾರಧಾರಿ ರಾಜಕೀಯ ಮಾಡುತ್ತಿದ್ದಾರೆ. ಅದನ್ನವರು ಕೊನೆಗೊಳಿಸುವರೇ? ಎಂದು ಪ್ರಶ್ನಿಸಿದ್ದಾರೆ.