ಸಂಭಾಷಣೆ ಸೋರಿಕೆ ಬಗ್ಗೆ ತನಿಖೆ ನಡೆಸುವಂತೆ ನಿವೃತ್ತ ನ್ಯಾಯಾಧೀಶ ಖುದ್ದುಸಿ ಮೇಲ್ಮನವಿ
ವೈದ್ಯಕೀಯ ಕಾಲೇಜು ಹಗರಣ

ಹೊಸದಿಲ್ಲಿ, ಜ.17: ವೈದ್ಯಕೀಯ ಕಾಲೇಜು ಲಂಚ ಹಗರಣಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ಬಂಧನಕ್ಕೀಡಾಗಿ ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಒಡಿಶಾ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಐ.ಎಂ ಖುದ್ದುಸಿ, ತನ್ನ ಮತ್ತು ಇತರ ಇಬ್ಬರು ಆರೋಪಿಗಳ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯು ಮಾಧ್ಯಮಗಳಿಗೆ ಸೋರಿಕೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಅತ್ಯಂತ ಗೌಪ್ಯವಾಗಿದ್ದ ದಾಖಲೆಗಳನ್ನು ಪ್ರಕರಣದ ಆರೋಪಿಗಳಿಗೂ ನೀಡದೆ ತನಿಖಾ ಸಂಸ್ಥೆಯಿಂದ ಹೊರಗಿನ ಜನರಿಗೆ ನೀಡಲಾಗಿದೆ ಎಂದು ಈ ಮನವಿಯಲ್ಲಿ ಆರೋಪಿಸಲಾಗಿದೆ. ಈ ಆರೋಪಕ್ಕೆ ಜನವರಿ 22ರ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ವಿಶೇಷ ನ್ಯಾಯಾಧೀಶರಾದ ಮನೋಜ್ ಜೈನ್ ಸಿಬಿಐಗೆ ಸೂಚಿಸಿದ್ದಾರೆ.
ಈ ಪ್ರಕರಣದ ತನಿಖೆಯಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದು ಖುದ್ದುಸಿ ಪರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ ವಕೀಲರಾದ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.
ಕೆಲವು ಪ್ರಮುಖ ಪತ್ರಿಕೆಗಳು ಖುದ್ದುಸಿ ಮತ್ತು ಇತರ ಇಬ್ಬರು ಆರೋಪಿಗಳ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ವಿವರವನ್ನು ನೀಡಿದ್ದರು. ಈ ಸಂಭಾಷಣೆಯನ್ನು ಸಿಬಿಐ ದಾಖಲಿಸಿಕೊಂಡಿರುವುದಾಗಿ ಪತ್ರಿಕೆಗಳು ತಿಳಿಸಿದ್ದವು.
ಈ ಸಂಭಾಷಣೆಗಳ ದಾಖಲೆಗಳನ್ನು ಸಿಬಿಐಯ ಅಧಿಕಾರಿಗಳೇ ಸೋರಿಕೆ ಮಾಡಿದ್ದಾರೆಯೇ ಅಥವಾ ಅವುಗಳನ್ನು ಕಳವುಗೈಯ್ಯಲಾಗಿದೆಯೇ ಎಂದು ಪತ್ತೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಮಾಧ್ಯಮಗಳೇ ವಿಚಾರಣೆ ನಡೆಸುವುದನ್ನು ತಪ್ಪಿಸಲು ಇದು ಅತ್ಯಂತ ಅಗತ್ಯವಾಗಿದೆ ಮತ್ತು ಮೂರನೇ ವ್ಯಕ್ತಿಯು ತನಿಖೆಯಲ್ಲಿ ಮೂಗುತೂರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲೂ ಇದು ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸೋರಿಕೆಯಾದ ದಾಖಲೆಗಳನ್ನು ತಿರುಚುವ ಸಾಧ್ಯತೆಗಳೂ ಇದ್ದು ಅದರ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಖುದ್ದುಸಿ ಮನವಿ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ಖುದ್ದುಸಿ, ಒರ್ವ ಮಧ್ಯವರ್ತಿ ಹಾಗೂ ಪ್ರಸಾದ್ ಶಿಕ್ಷಣ ಸಂಸ್ಥೆಯ ಮಾಲಕರಾದ ಬಿ.ಪಿ ಯಾದವ್ ಅವರು ನಡೆಸಿರುವ ದೂರವಾಣಿ ಸಂಭಾಷಣೆಯನ್ನು ಸಿಬಿಐ ದಾಖಲಿಸಿಕೊಂಡಿತ್ತು. ಖುದ್ದುಸಿ ಅವರನ್ನು ಕಳೆದ ವರ್ಷ ಬಂಧಿಸಲಾಗಿದ್ದರೂ ದಿಲ್ಲಿ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.