ವೇಣುಗೋಪಾಲ್ ಎದುರು ಸಚಿವರ ಪರೇಡ್

ಬೆಂಗಳೂರು, ಜ.17: ಪಕ್ಷದ ಕಾರ್ಯಕ್ರಮಗಳಲ್ಲಿ ಸಚಿವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೂರು ನೀಡಿದ ಬೆನ್ನಲ್ಲೆ ರಾಜ್ಯ ಸರಕಾರದ ಕೆಲ ಸಚಿವರು, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎದುರು ಹಾಜರಾಗಿ ಸ್ಪಷ್ಟಣೆ ನೀಡಿದ್ದಾರೆ.
ಬುಧವಾರ ನಗರದ ಕುಮಾರಕೃಪಾ ಅತಿಥಿ ಗೃಹಕ್ಕೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದರು.
ಚುನಾವಣೆ ಹೊಸ್ತಿಲಿನಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದ, ಪಕ್ಷ ಸಂಘಟನೆ ವಿಚಾರದಲ್ಲಿ ಉದಾಸೀನ ಮನೋಭಾವನೆ ವ್ಯಕ್ತಪಡಿಸುವ ಸಚಿವರು ಸೇರಿದಂತೆ ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದರು.
ಅದರಂತೆ, ಕುಮಾರಕೃಪಾ ಅತಿಥಿ ಗೃಹದಲ್ಲಿ ತಂಗಿದ್ದ ವೇಣುಗೋಪಾಲ್‌ರನ್ನು ಭೇಟಿ ಮಾಡಿದ ಸಚಿವರು, ಪಕ್ಷ ಸಂಘಟನೆ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ವಾಗ್ದಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವೇಣುಗೋಪಾಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ್‌ಕುಮಾರ್, ಗೋವಾ ನೀರಾವರಿ ಸಚಿವರು ಮಹಾದಾಯಿ ನದಿ ನೀರು ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ಸಾರ್ವಜನಿಕ ಬದುಕಿನಲ್ಲಿ ಈ ರೀತಿಯ ಹೇಳಿಕೆಗಳನ್ನು ಬಳಸುವುದು ತಪ್ಪು ಎಂದರು.
ಕನ್ನಡಿಗರನ್ನು ಹರಾಮಿ ಎಂದು ಕರೆದಿರುವುದು ತಪ್ಪು. ಈ ಮಾತು ಅವರಿಗೆ ಗೌರವ ತರುವುದಿಲ್ಲ. ಜನ ನಮ್ಮನ್ನ ನೋಡಿ ಏನು ತಿಳಿದುಕೊಳ್ಳುತ್ತಾರೆ. ನಾಚಿಕೆ ಆಗುತ್ತೆ ಇಂತಹವರ ಹೇಳಿಕೆಗಳನ್ನು ಕೇಳಲು. ಮಹಾದಾಯಿ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಅವರು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಗೋವಾ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಮಹಾದಾಯಿ ವಿಚಾರದಲ್ಲಿ ಕನ್ನಡಿಗರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿರುವುದು ಸರಿಯಿಲ್ಲ. ಆತನಿಗೆ ಬುದ್ದಿ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋವಾ ನೀರಾವರಿ ಸಚಿವರಿಗೆ ತಲೆ ಸರಿಯಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸಬೇಕು. ಕೂಲಿ ನಾಲಿ ಮಾಡಿ ಕನ್ನಡಿಗರೇ ಗೋವಾ ರಾಜ್ಯವನ್ನು ಕಟ್ಟಿದ್ದಾರೆ. ನಾವೇನೂ ಬೇರೆ ದೇಶದವರೇ, ನಾವು ಕುಡಿಯುವ ನೀರೇ ಕೇಳುತ್ತಿದ್ದೇವೆ. ಅಕ್ಕ ಪಕ್ಕದ ರಾಜ್ಯದವರು ಬಹಳ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಇಂತಹ ಹೇಳಿಕೆಗಳಿಂದ ಘರ್ಷಣೆಗೆ ಎಡೆ ಮಾಡಿಕೊಡಬಾರದು. ಗೋವಾ ಮುಖ್ಯಮಂತ್ರಿ ಅವರನ್ನು ಕರೆದು ಬುದ್ಧಿ ಮಾತು ಹೇಳಬೇಕು ಎಂದು ಆಂಜನೇಯ ಆಗ್ರಹಿಸಿದರು.







