ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಜ. 17: ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ವಾಯು ಪಡೆಯ ಮುಂಚೂಣಿ ಯುದ್ಧ ವಿಮಾನ ಸುಖೋಯ್-30 ಎಂಕೆಐಯಲ್ಲಿ ಬುಧವಾರ ಹಾರಾಟ ನಡೆಸಿದರು. ಪರಮಾಣು ದಾಳಿ ಹಾಗೂ ಶತ್ರು ಭೂಪ್ರದೇಶ ಪ್ರವೇಶ ಸಾಮರ್ಥ್ಯ ಹೊಂದಿರುವ ಈ ವಿಮಾನದಲ್ಲಿ ರಕ್ಷಣಾ ಸಚಿವೆ ಜಿ-ಸೂಟ್ ಧರಿಸಿ ಹಾರಾಟ ನಡೆಸಿದರು. ಸುಖೋಯ್ ವಿಮಾನದಲ್ಲಿ ಹೀಗೆ ಹಾರಾಟ ನಡೆಸುತ್ತಿರುವ ಎರಡನೇ ಮಹಿಳಾ ನಾಯಕಿ ನಿರ್ಮಲಾ ಸೀತಾರಾಮನ್. ಈ ಹಿಂದೆ ಯುದ್ಧ ವಿಮಾನದಲ್ಲಿ ಮಾಜಿ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರತಿಭಾ ಪಾಟೀಲ್ ಹಾಗೂ ಎಪಿಜೆ ಅಬ್ದುಲ್ ಕಲಾಂ ಹಾರಾಟ ನಡೆಸಿದ್ದರು. ಜಾರ್ಜ್ ಫೆರ್ನಾಂಡಿಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ವಿಐಪಿ. 2016 ಮೇಯಲ್ಲಿ ಕೇಂದ್ರ ಸಚಿವ ಕಿರಣ್ ರಿಜೆಜು ಕೂಡಾ ಹಾರಾಟ ನಡೆಸಿದ್ದರು.
ಸೇನಾ ಕಾರ್ಯಾಚರಣೆ ಅರ್ಥ ಮಾಡಿಕೊಳ್ಳಲು ಸೇನೆ, ವಾಯು ಪಡೆ ಹಾಗೂ ನೌಕಪಡೆಯಲ್ಲಿ ಸಮಯ ವಿನಿಯೋಗಿಸಿದ ಭಾರತದ ಮೊದಲ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್. ಕೆಲವು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಿಮಾನ ವಾಹಕ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಪ್ರಯಾಣಿಸಿದ್ದರು. ಹಾರಾಟದ ವೇಳೆ ಸೀತಾರಾಮನ್ ಜಿ-ಸೂಟ್ ಅಥವಾ ಗುರುತ್ವಾಕರ್ಷಣ ತಡೆ ಸೂಟ್ ಧರಿಸಿದ್ದರು. ಆಮ್ಲಜನಕದ ಮುಖವಾಡದೊಂದಿಗೆ ಹೆಲ್ಮೆಟ್ ಧರಿಸಿದ್ದರು. ವಿಮಾನದ ಹಿಂದಿನ ಸೀಟಿನಲ್ಲಿ ಕುಳಿತು ಎದುರಿನಲ್ಲಿದ್ದ ಪೈಲೆಟ್‌ನೊಂದಿಗೆ ಇಂಟರ್‌ಕಾಮ್ ಮೂಲಕ ನಿರಂತರ ಸಂವಹನ ನಡೆಸಿದರು.







