ಗುಜರಾತ್ ಪೊಲೀಸ್ ಜೊತೆ ಸೇರಿ ಪ್ರಧಾನಿ ಮೋದಿಯಿಂದ ನನ್ನ ವಿರುದ್ಧ ಸಂಚು : ತೊಗಾಡಿಯ

ಅಹ್ಮದಾಬಾದ್, ಜ.17: ಪ್ರಧಾನಿ ಮೋದಿ ಗುಜರಾತ್ ಪೊಲೀಸ್ ಇಲಾಖೆ ಜೊತೆ ಸೇರಿಕೊಂಡು ತನ್ನ ವಿರುದ್ಧ ಸಂಚು ನಡೆಸುತ್ತಿದ್ದಾರೆ ಎಂದು ಮೋದಿಯ ಒಂದು ಕಾಲದ ಆಪ್ತ ಸ್ನೇಹಿತ ಮತ್ತು ವಿಶ್ವಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯ ಬುಧವಾರ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಕುಳಿತಿರುವ ರಾಜಕೀಯ ನಾಯಕರ ಆಜ್ಞೆಯಂತೆ ಅಹ್ಮದಾಬಾದ್‌ನ ಜಂಟಿ ಪೊಲೀಸ್ ಆಯುಕ್ತರಾದ ಜೆ.ಕೆ ಭಟ್ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಮತ್ತು ಸಂಘಟನೆಯ ರಾಷ್ಟ್ರೀಯ ಕಾರ್ಯಕರ್ತರನ್ನು ಶೋಷಿಸುತ್ತಿದ್ದಾರೆ ಎಂದು ತೊಗಾಡಿಯ ಆರೋಪಿಸಿದ್ದಾರೆ.
“ಕಳೆದ ಹದಿನೈದು ದಿನಗಳಲ್ಲಿ ಭಟ್ ಅದೆಷ್ಟು ಬಾರಿ ಪ್ರಧಾನಿಯವರ ಜೊತೆ ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ?, ಅವರ ದೂರವಾಣಿ ಸಂಭಾಷಣೆಯನ್ನು ಸಾರ್ವಜನಿಕಗೊಳಿಸಬೇಕು ಎಂದು ವಿಶ್ವಹಿಂದೂ ಪರಿಷತ್‌ನ ಪ್ರಬಾರ ಅಧ್ಯಕ್ಷರಾಗಿರುವ ತೊಗಾಡಿಯ ಮಾಧ್ಯಮದ ಮುಂದೆ ಆಗ್ರಹಿಸಿದರು.
ಮಂಗಳವಾರದಂದು ಪತ್ರಿಕಾಗೋಷ್ಟಿ ಕರೆದಿದ್ದ ಭಟ್, ಪ್ರವೀಣ್ ತೊಗಾಡಿಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಮತ್ತು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ತೊಗಾಡಿಯ ಪತ್ರಿಕಾಗೋಷ್ಟಿ ಕರೆದು ತಮ್ಮ ವಿರುದ್ಧ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ವಿಹಿಂಪ ನಾಯಕರಾಗಿರುವ ತೊಗಾಡಿಯ ಸೋಮವಾರದಂದು ನಾಪತ್ತೆಯಾಗಿದ್ದರು. ಸುಮಾರು ಹತ್ತು ಗಂಟೆಗಳ ನಂತರ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಪತ್ತೆಯಾಗಿದ್ದರು. ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು.
ಹತ್ತು ವರ್ಷಗಳಷ್ಟು ಹಳೆಯ ತನ್ನ ವಿರುದ್ಧದ ಪ್ರಕರಣವೊಂದರಲ್ಲಿ ತನ್ನನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಆಗಮಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ವಸುಂಧರಾ ರಾಜೆ ಅಥವಾ ಗೃಹ ಸಚಿವರಾದ ಗುಲಾಬ್‌ಚಂದ್ ಕಟರಿಯ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತೊಗಾಡಿಯ ತಿಳಿಸಿದ್ದರು.
“2015ರಲ್ಲಿ ಹಿಂಪಡೆಯಲಾಗಿದ್ದ ಪ್ರಕರಣವೊಂದರಲ್ಲಿ ನನ್ನನ್ನು ಬಂಧಿಸಲು ಪೊಲೀಸರು ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ನನಗೆ ದೊರಕಿತ್ತು. ಹಾಗಾದರೆ ಈ ಸೂಚನೆಯನ್ನು ಪೊಲೀಸರಿಗೆ ನೀಡಿದವರು ಯಾರು?, ಪೊಲೀಸ್ ಅಧಿಕಾರಿ ಭಟ್ ದಿಲ್ಲಿಯಲ್ಲಿರುವ ರಾಜಕೀಯ ನಾಯಕರ ಆದೇಶದಂತೆ ವರ್ತಿಸುತ್ತಿರುವಂತೆ ಕಾಣುತ್ತಿದೆ” ಎಂದು ತೊಗಾಡಿಯ ಆರೋಪಿಸಿದ್ದರು.
ಪ್ರಧಾನಿ ಮೋದಿಯನ್ನು ತನ್ನ ಹಳೆ ಗೆಳೆಯ ಎಂದು ಸಂಭೋದಿಸಿದ ತೊಗಾಡಿಯ ಪ್ರಜಾಪ್ರಭುತ್ವವನ್ನು ಕೊಲೆ ಮಾಡುವಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ಮನವಿ ಮಾಡಿದರು. ಪೊಲೀಸ್ ಅಪರಾಧ ವಿಭಾಗವು ನನ್ನ ಘನತೆಗೆ ಕುಂದುಂಟು ಮಾಡುವ ದೃಷ್ಟಿಯಿಂದ ನನ್ನ ಕೆಲವು ಆಯ್ದ ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ 2005ರಲ್ಲಿ ಸಂಜಯ್ ಜೋಶಿಯವರ ವಿಡಿಯೊಗಳನ್ನು ತಯಾರಿಸಲಾಗಿತ್ತು. ಅವರ ಹೆಸರುಗಳನ್ನು ನಾನು ಸರಿಯಾದ ಸಮಯದಲ್ಲಿ ತಿಳಿಸುತ್ತೇನೆ ಎಂದು ತೊಗಾಡಿಯ ಹೇಳಿದರು.