ಲೋಕಾಯುಕ್ತ ರಿಜಿಸ್ಟ್ರಾರ್ ವಿರುದ್ಧ ಹಕ್ಕುಚ್ಯುತಿ ನಡೆಸದಂತೆ ಹೈಕೋರ್ಟ್ ಆದೇಶ
ವಾರ್ಷಿಕ ವರದಿ ಸಲ್ಲಿಸಲು ವಿಳಂಬ ವಿಚಾರ

ಬೆಂಗಳೂರು, ಜ.17: ಲೋಕಾಯುಕ್ತ ಸಂಸ್ಥೆಯ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿ ಸಲ್ಲಿಸುವಲ್ಲಿ ಮಾಡಿದ ವಿಳಂಬ ಸಂಬಂಧ ಕಾಗದ ಪತ್ರಗಳ ಸಮಿತಿ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡದ ವಿಚಾರವಾಗಿ ಲೋಕಾಯುಕ್ತ ರಿಜಿಸ್ಟ್ರಾರ್ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆ ನಡೆಸದಂತೆ ವಿಧಾನಸಭೆ ಸ್ಪೀಕರ್ ಮತ್ತು ರಾಜ್ಯ ವಿಧಾನಸಭಾ ಹಕ್ಕು ಬಾಧ್ಯತಾ ಸಮಿತಿಗೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಲೋಕಾಯುಕ್ತ ರಿಜಿಸ್ಟ್ರಾರ್ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆ ನಡೆಸಲು ಕಾಗದ ಪತ್ರಗಳ ಸಮಿತಿ ವಿಧಾನಸಭೆ ಸ್ಪೀಕರ್ ಅವರಿಗೆ ಮಾಡಿದ್ದ ಶಿಫಾರಸು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತರು ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಸಮಿತಿಯ ಶಿಫಾರಸು ಮೇರೆಗೆ ಯಾವುದೇ ಮುಂದಿನ ಕ್ರಮ ಜರುಗಿಸದಂತೆ ವಿಧಾನಸಭೆ ಸ್ಪೀಕರ್ ಮತ್ತು ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿಗೆ ಸೂಚಿಸಿದರು. ಅಲ್ಲದೆ, ಅರ್ಜಿ ಸಂಬಂಧ ವಿಧಾನಸಭೆ ಸ್ಪೀಕರ್, ಹಕ್ಕು ಬಾಧ್ಯತಾ ಸಮಿತಿ, ಕಾಗದ ಪತ್ರಗಳ ಸಮಿತಿ, ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ ಪೀಠ ವಿಚಾರಣೆ ಮುಂದೂಡಿದೆ.







