ಗುಜರಾತ್: ತೈಲ ಸಾಗಾಣಿಕೆ ಹಡಗಿನಲ್ಲಿ ಬೆಂಕಿ

ಹೊಸದಿಲ್ಲಿ, ಜ. 18: ಸುಮಾರು 30 ಸಾವಿರ ಟನ್ ಹೈಸ್ಪೀಡ್ ಡೀಸೆಲ್ ತುಂಬಿಕೊಂಡು ಹೋಗುತ್ತಿದ್ದ ತೈಲ ಟ್ಯಾಂಕರ್ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವ ಘಟನೆ ಗುಜರಾತ್ ಕರಾವಳಿಯಲ್ಲಿ ಸಂಭವಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
ತೈಲ ಟ್ಯಾಂಕರ್ನಿಂದ ಸಮುದ್ರಕ್ಕೆ ತೈಲ ಸೋರಿಕೆಯಾಗಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಎಂಟಿ ಜೆನೆಸ್ಸಾ ಹೆಸರಿನ ಈ ತೈಲ ಟ್ಯಾಂಕರ್, ಕಾಂಡ್ಲಾದ ದೀನದಯಾಳ್ ಬಂದರಿನಿಂದ 15 ನಾಟಿಕಲ್ ಮೈಲು ದೂರದಲ್ಲಿ ಬುಧವಾರ ಸಂಜೆ 6ರ ಸುಮಾರಿಗೆ ಬೆಂಕಿ ಆಕಸ್ಮಿಕಕ್ಕೆ ಒಳಗಾಗಿದೆ.
ಭಾರತೀಯ ಕರಾವಳಿ ಕಾವಲುಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, 26 ಮಂದಿ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.
ಸಿಬ್ಬಂದಿ ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿದ್ದು, ಅದನ್ನು ನಂದಿಸುವ ಪ್ರಯತ್ನ ಮುಂದುವರಿದಿದೆ ಎಂದು ಕರಾವಳಿ ಕಾವಲುಪಡೆ ಅಧಿಕಾರಿಗಳು ಹೇಳಿದ್ದಾರೆ.
ಕಾವಲು ಪಡೆಯ ಇಂಟರ್ಸೆಪ್ಟರ್ ನೌಕೆ ಸಿ-403ರ ಮೂಲಕ ಪರಿಹಾರ ಕಾರ್ಯಾಚರಣೆ ನಡೆದಿದೆ. ಮಾಲಿನ್ಯ ನಿಯಂತ್ರಣ ತಂಡ ಕೂಡಾ ಕಾರ್ಯಾ ಚರಣೆಗೆ ಇಳಿದಿದೆ. ಡ್ರೋಣ್ ಹೊಂದಿದ ವಿಮಾನಗಳು ಕೂಡಾ ಬೆಂಕಿ ಶಮನ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.