ಉತ್ತರ ಪ್ರದೇಶ: ಪೊಲೀಸ್ ಎನ್ ಕೌಂಟರ್ ಗೆ 8 ವರ್ಷದ ಬಾಲಕ ಬಲಿ

ಆಗ್ರಾ, ಜ.18: ಪೊಲೀಸ್ ಎನ್ ಕೌಂಟರ್ ಕಾರ್ಯಾಚರಣೆಯ ವೇಳೆ ಗುಂಡೇಟು ತಗಲಿ 8 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಥುರಾದ ಮೋಹನ್ ಪುರ ಗ್ರಾಮದಲ್ಲಿ ನಡೆದಿದೆ.
ಲೂಟಿ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಕ್ರಿಮಿನಲ್ ಗಳು ಮೋಹನ್ ಪುರದಲ್ಲಿದ್ದಾರೆ ಎನ್ನುವ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ಸಂದರ್ಭ ಕ್ರಿಮಿನಲ್ ಗಳು ಹಾಗು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ಗುಂಡೊಂದು ಬಾಲಕ ಮಾಧವ್ ನ ತಲೆಗೆ ನುಗ್ಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟಿದ್ದ.
ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಕ್ರಿಮಿನಲ್ ಗಳನ್ನು ಸುತ್ತುವರಿದ ಪೊಲೀಸರು ಗುಂಡಿನ ಮಳೆಗರೆದಿದ್ದರು ಎನ್ನುತ್ತಾರೆ.
“ಗ್ರಾಮಕ್ಕೆ ಬಂದ ಮೂವರು ಪೊಲೀಸರು ಕ್ರಿಮಿನಲ್ ಗಳ ಜೊತೆ ಟೆರೇಸ್ ನಲ್ಲಿ ನಿಲ್ಲುವಂತೆ ಹೇಳಿದರು. ಆದರೆ ತಕ್ಷಣ ಪೊಲೀಸರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದು, ಅನ್ಯಾಯವಾಗಿ ನನ್ನ ಮೊಮ್ಮಗ ಬಲಿಯಾಗಿದ್ದಾನೆ” ಎಂದು ಮಾಧವ್ ನ ಅಜ್ಜ ಶಿವ್ ಶಂಕರ್ ಹೇಳಿದ್ದಾರೆ.
ಬಾಲಕ ಮನೆಯ ಮುಂದೆ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಎಂದು ಬಾಲಕನ ಅಜ್ಜ ತಿಳಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ನೋಟಿಸ್ ಗಳ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ಎನ್ ಕೌಂಟರ್ ಗಳು ನಡೆಯುತ್ತಲೇ ಇವೆ. ಆದಿತ್ಯನಾಥ್ ಸರಕಾರ ಅಧಿಕಾರಕ್ಕೇರಿದ ನಂತರ 33 ಮಂದಿಯನ್ನು ಎನ್ ಕೌಂಟರ್ ಗಳಲ್ಲಿ ಕೊಲ್ಲಲಾಗಿದೆ. ರಾಜ್ಯಾದ್ಯಂತ 900 ಎನ್ ಕೌಂಟರ್ ಗಳು ನಡೆದಿದ್ದು, 196 ಮಂದಿ ಗಾಯಗೊಂಡಿದ್ದಾರೆ.