ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಚುನಾವಣಾ ದಿನಾಂಕ ಪ್ರಕಟ

ಹೊಸದಿಲ್ಲಿ, ಜ. 18: ತ್ರಿಪುರಾ ವಿಧಾನ ಸಭೆ ಚುನಾವಣೆ ಫೆಬ್ರವರಿ 18ರಂದು ನಡೆಯಲಿದೆ. ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನ ಸಭೆ ಚುನಾವಣೆ ಫೆಬ್ರವರಿ 27ರಂದು ನಡೆಯಲಿದೆ. ಮೂರು ರಾಜ್ಯಗಳ ಫಲಿತಾಂಶವನ್ನು ಮಾರ್ಚ್ 3ರಂದು ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಮೇಘಾಲಯ, ನಾಗಾಲ್ಯಾಂಡ್ ಹಾಗೂ ತ್ರಿಪುರದಲ್ಲಿ ತಲಾ 60 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತ್ರಿಪುರಾದ ನೂತನ ವಿಧಾನ ಸಭೆಯನ್ನು ಮಾರ್ಚ್ 6ರ ಒಳಗೆ ಆಯ್ಕೆ ಮಾಡಬೇಕು. ಮೇಘಾಲಯ ಹಾಗೂ ನಾಗಾಲ್ಯಂಡ್ ವಿಧಾನ ಸಭೆಯ ಅಧಿಕಾರವಧಿ ಅನುಕ್ರಮವಾಗಿ ಮಾರ್ಚ್ 13 ಹಾಗೂ 14ರಂದು ಅಂತ್ಯಗೊಳ್ಳಲಿದೆ. ಗುರುವಾರದಿಂದ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ. ಮೂರು ರಾಜ್ಯಗಳಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಹಾಗೂ ವಿವಿಪಿಎಟಿ ಬಳಸಲಾಗುವುದು. ಮೊದಲ ಹಂತದ ಪರಿಶೀಲನೆ ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ತಿಳಿಸಿದ್ದಾರೆ.
ತ್ರಿಪುರದಲ್ಲಿ 1993ರಿಂದ ಎಡರಂಗ ಅಧಿಕಾರದಲ್ಲಿದೆ. ಮಾಣಿಕ್ ಸರ್ಕಾರ್ 4ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಈ ಬಾರಿ ತ್ರಿಪುರದಲ್ಲಿ ಬದಲಾವಣೆಯ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. 6 ತೃಣಮೂಲ ಕಾಂಗ್ರೆಸ್ ಹಾಗೂ ಓರ್ವ ಕಾಂಗ್ರೆಸ್ ಶಾಸಕ ಸೇರಿದ ಬಳಿಕ ಬಿಜೆಪಿಯ ಸಾಮರ್ಥ ಈಶಾನ್ಯದಲ್ಲಿ ಹೆಚ್ಚಿದೆ. ಮೇಘಾಲಯಲ್ಲಿ ಕಾಂಗ್ರೆಸ್ ನೇತೃತ್ವದ ಮುಕುಲ್ ಸಂಗ್ಮಾ ಅವರ ಸರಕಾರ ಕಳೆದ 8 ವರ್ಷಗಳಿಂದ ಆಡಳಿತ ನಡೆಸುತ್ತಿದೆ. 2016ರಲ್ಲಿ ಮೃತಪಟ್ಟ ಕಾಂಗ್ರೆಸ್ನ ಮಾಜಿ ನಾಯಕ ಪಿ.ಎ. ಸಂಗ್ಮಾ ಸ್ಥಾಪಿಸಿದ ಮಣಿಪುರ ನ್ಯಾಶನಲ್ ಪೀಪಲ್ಸ್ ಪಾರ್ಟಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಕಾಂಗ್ರೆಸ್ಗೆ ಸವಾಲು ಎದುರಾಗಿದೆ. ನಾಗಲ್ಯಾಂಡ್ನಲ್ಲಿ ಬಿಜೆಪಿ ಬೆಂಬಲಿತ ನಾಗಾ ಪೀಪಲ್ಸ್ ಫ್ರಂಟ್ ನೇತೃತ್ವದ ಡೆಮಾಕ್ರೆಟಿಕ್ ಅಲೈಂಜ್ ಅಧಿಕಾರದಲ್ಲಿದೆ. ಟಿ.ಆರ್. ಝಿಲಿಯಾಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಬದಲಾವಣೆಯಿಂದ ಹಿಂದಿನ ವರ್ಷಗಳಲ್ಲಿ ರಾಜ್ಯ ರಾಜಕೀಯ ಬಿಕ್ಕಟ್ಟು ಎದುರಿಸಬೇಕಾಗಿತ್ತು. ಉಗ್ರ ಚಟುವಟಿಕೆ ಹಾಗೂ ಶಾಂತಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ವಿಧಾನ ಸಭೆ ಚುನಾವಣೆ ನಡೆಸಬಾರದು ಎಂಬುದು ರಾಜ್ಯದ ದೊಡ್ಡ ಸಂಖ್ಯೆಯ ಜನರು ಆಕಾಂಕ್ಷೆ.