ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿಯೇ ರಹಸ್ಯ ಭೂಗತ ಕಟ್ಟಡ ನಿರ್ಮಾಣ ಪತ್ತೆ

ವಾರಣಾಸಿ, ಜ.18 : ಇಲ್ಲಿನ ವಿಶ್ವವಿಖ್ಯಾತ ಕಾಶಿ ವಿಶ್ವನಾಥ ದೇಗುಲಕ್ಕಿಂತ ಕೆಲವೇ ಹೆಜ್ಜೆಗಳಷ್ಟು ದೂರವಿರುವ ಹಳೆಯ ಕಟ್ಟಡಗಳ ಅಡಿಯಲ್ಲಿ 8000 ಚದರ ಅಡಿಯ ಅಕ್ರಮ ವಾಣಿಜ್ಯ ಸಂಕೀರ್ಣವೊಂದು ಹೊಸದಾಗಿ ನಿರ್ಮಾಣವಾಗಿರುವುದು ಪತ್ತೆಯಾಗಿದೆ. ಈ ಅಕ್ರಮ ನಿರ್ಮಾಣ ಅತಿ ಸೂಕ್ಷ್ಮ ಪ್ರದೇಶದಲ್ಲಿ ಕಂಡು ಬಂದಿರುವುದರಿಂದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಸುವ್ಯವಸ್ಥೆ) ಈ ಬಗ್ಗೆ ವರದಿ ಕೇಳಿದ್ದಾರೆ.
ಕಾಶಿ ವಿಶ್ವನಾಥ ದೇವಳ ಸಂಕೀರ್ಣದ ಹೊರಗಿರುವ ಸುರಕ್ಷಾ ವ್ಯವಸ್ಥೆ (ಯೆಲ್ಲೋ ಝೋನ್)ಗಿಂತ ಕೇವಲ 50 ಮೀಟರ್ ದೂರವಿರುವ ದಾಲ್ಮಂಡಿ ಪ್ರದೇಶದಲ್ಲಿ ಈ ನಿರ್ಮಾಣ ಪತ್ತೆಯಾಗಿದೆ.
ಮಂಗಳವಾರ ತಡ ರಾತ್ರಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್ ಕೆ ಭಾರಧ್ವಾಜ್ ಅವರು ಗಸ್ತಿನಲ್ಲಿರುವಾಗ ಗಲ್ಲಿಯೊಂದರಲ್ಲಿನ ಹಳೆಯ ಅಂಗಡಿಗಳ ವೆಂಟಿಲೇಟರ್ ಮುಖಾಂತರ ಬೆಳಕು ಹೊರಬರುತ್ತಿರುವುದನ್ನು ನೋಡಿ ಇಣುಕಿದಾಗ ಒಳಗೆ ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬ ಕೆಲಸದಲ್ಲಿ ನಿರತನಾಗಿರುವುದು ಪತ್ತೆಯಾಗಿತ್ತು. ನಂತರ ಪೊಲೀಸ್ ಅಧಿಕಾರಿ ಒಳ ಹೋಗಿ ನೋಡಿದಾಗ ಅವರಿಗೆ ಅಚ್ಚರಿ ಕಾದಿತ್ತು.
ಈ ಅಕ್ರಮ ಕಟ್ಟಡ ಪತ್ತೆಯಾದ ಹಿನ್ನೆಲೆಯಲ್ಲಿ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ ಒಬ್ಬ ಸಹಾಯಕ ಇಂಜಿನಿಯರ್ ಹಾಗೂ ಇಬ್ಬರು ಕಿರಿಯ ಇಂಜಿನಿಯರುಗಳನ್ನು ಸೇವೆಯಿಂದ ವಜಾಗೊಳಿಸಿದೆ. ಉಗ್ರ ಬೆದರಿಕೆಯನ್ನು ಸಾಕಷ್ಟು ಬಾರಿ ಎದುರಿಸಿರುವ ಈ ಖ್ಯಾತ ದೇವಾಲಯದ ಪಕ್ಕದಲ್ಲಿಯೇ ಇಂತಹ ಅಕ್ರಮ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವನ್ನು ತಿಳಿಯುವ ಪ್ರಯತ್ನ ನಡೆಸಲಾಗುತ್ತಿದೆ.