ಐಐಎಸ್ ಅಧಿಕಾರಿಗಳ ಮರುನಿಯೋಜನೆ
ಹೊಸದಿಲ್ಲಿ,ಜ,18: ವಿವಿಧ ಸಚಿವಾಲಯಗಳು ಮತ್ತು ಸರಕಾರಿ ಇಲಾಖೆಗಳಲ್ಲಿನ ಇಂಡಿಯನ್ ಇನ್‌ಫಾರ್ಮೇಷನ್ ಸರ್ವಿಸ್(ಐಐಎಸ್) ಅಥವಾ ಭಾರತೀಯ ಮಾಹಿತಿ ಸೇವೆ ಕೇಡರ್‌ನ ಹಲವಾರು ಅಧಿಕಾರಿಗಳನ್ನು ಪದೋನ್ನತಿಗೊಳಿಸಿ ಅಥವಾ ಮರು ನಿಯೋಜನೆಯನ್ನು ಮಾಡಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಬುಧವಾರ ಆದೇಶ ಹೊರಡಿಸಿದೆ.
ರಕ್ಷಣಾ ಸಚಿವಾಲಯದಲ್ಲಿ ಮಾಹಿತಿ ಅಧಿಕಾರಿಯ ಹುದ್ದೆಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊದಲ್ಲಿ ಹೆಚ್ಚುವರಿ ಮಹಾ ನಿರ್ದೇಶಕಿಯಾಗಿರುವ ನಿಧಿ ಪಾಂಡೆಯವರ ಹೆಸರನ್ನು ಪ್ರಕಟಿಸಿದೆ. ಇದೇ ವೇಳೆ ರಕ್ಷಣಾ ಸಚಿವಾಲಯವು ತನ್ನ ಅಧಿಕೃತ ವಕ್ತಾರರ ಹುದ್ದೆಗೆ ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ ಸರ್ವಿಸ್‌ನ ಸ್ವರ್ಣಶ್ರೀ ರಾವ್ ರಾಜಶೇಖರ್ ಅವರು ಹೆಸರನ್ನು ಪ್ರಕಟಿಸಿದೆ. ಆದರೆ ಈ ಇಬ್ಬರು ಅಧಿಕಾರಿಗಳು ಯಾವ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಸರಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಪ್ರಚಾರಕ್ಕಾಗಿ ಗ್ರೂಪ್ ಎ ಐಐಎಸ್ ನ ಅಧಿಕಾರಿಗಳನ್ನು ವಿವಿಧ ಸಚಿವಾಲಯಗಳು ಮತ್ತು ಸರಕಾರಿ ಇಲಾಖೆಗಳಲ್ಲಿ ನಿಯೋಜಿಸಲಾಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 24 ಐಐಎಸ್ ಅಧಿಕಾರಿಗಳ ನಿಯೋಜನೆಯನ್ನು ಪ್ರಕಟಿಸಿತ್ತು.
ಸಚಿವಾಲಯದ ಈ ನಿಯೋಜನೆಗಳನ್ನು ಐಐಎಸ್ ಅಧಿಕಾರಿಗಳ ಸಂಘಗಳ ಒಕ್ಕೂಟವು ವಿರೋಧಿಸಿದೆ. ಕೆಲವು ಹಿರಿಯ ಅಧಿಕಾರಿಗಳನ್ನು ನಿಯೋಜಿಸಿರುವ ಸ್ಥಳಗಳಲ್ಲಿ ಅವರಿಗೆ ನಿಗದಿ ಮಾಡಿರುವ ಹುದ್ದೆಗಳೇ ಇಲ್ಲ ಮತ್ತು ಇನ್ನು ಕೆಲವು ಅಧಿಕಾರಿಗಳು ವರ್ಗಾವಣೆಗೊಂಡ ಸ್ಥಳಗಳಲ್ಲಿ ಒಂದೇ ಹುದ್ದೆಯನ್ನು ಹಲವು ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ ಹಾಗೂ ಕೆಲಸದ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ ಎಂದು ಅದು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.