ಕೊಲೆ ಆರೋಪಿಯನ್ನು ಹಿಡಿಯಲು ನೆರವಾದದ್ದು ಈ ಸೆಲ್ಫಿ!
ಗೆಳತಿಯನ್ನು ಕೊಂದ ಯುವತಿ

ಒಟ್ಟಾವ (ಕೆನಡ), ಜ. 18: ಕೆನಡದಲ್ಲಿ ತನ್ನ ಗೆಳತಿಯನ್ನು ಕೊಂದು ಏನೂ ಗೊತ್ತಿಲ್ಲದಂತೆ ನಟಿಸುತ್ತಿದ್ದ ಮಹಿಳೆಯೊಬ್ಬಳ ಅಪರಾಧ ಕೊನೆಗೂ ಸಾಬೀತಾಗಿದೆ. ಕೊಲೆಗೆ ಬಳಸಿದ ಆಯುಧದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಪತ್ತೆಯಾದ ಬಳಿಕ ಈ ಬೆಳವಣಿಗೆ ನಡೆದಿದೆ.
2 ವರ್ಷಗಳ ಹಿಂದೆ 18 ವರ್ಷದ ಬ್ರಿಟ್ನಿ ಗಾರ್ಗೊಲ್‌ರನ್ನು ಕೊಂದಿರುವುದನ್ನು 21 ವರ್ಷದ ಚೆಯನ್ ರೋಸ್ ಆ್ಯಂಟೋಯ್ನಿ ಎಂಬ ಮಹಿಳೆ ಸೋಮವಾರ ಒಪ್ಪಿಕೊಂಡಿದ್ದಾಳೆ ಎಂದು ಬಿಬಿಸಿ ಬುಧವಾರ ವರದಿ ಮಾಡಿದೆ.
ಸಸ್ಕಟೂನ್ ಎಂಬಲ್ಲಿ ಗಾರ್ಗೊಲ್‌ರನ್ನು ಕುತ್ತಿಗೆ ಹಿಸುಕಿ ಕೊಲ್ಲಲಾಗಿತ್ತು ಹಾಗೂ ಮೃತದೇಹದ ಪಕ್ಕದಲ್ಲಿ ಆ್ಯಂಟೋಯ್ನಿಳ ಬೆಲ್ಟ್ ಪತ್ತೆಯಾಗಿತ್ತು.
ಗಾರ್ಗೊಲ್ ಸಾಯುವ ಕೆಲವು ಗಂಟೆಗಳ ಮೊದಲು, ಆ್ಯಂಟೋಯ್ನ ಫೇಸ್‌ಬುಕ್‌ನಲ್ಲಿ ತಾನು ಮತ್ತು ಗಾರ್ಗೊಲ್ ಜೊತೆಯಾಗಿರುವ ಸೆಲ್ಫಿಯೊಂದನ್ನು ಹಾಕಿದ್ದಳು. ಆ ಚಿತ್ರದಲ್ಲಿ ಆಕೆ ಮೃತದೇಹದ ಬಳಿ ಪತ್ತೆಯಾಗಿದ್ದ ಬೆಲ್ಟನ್ನು ಧರಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಆರೋಪಿ ಎಂದು ಪರಿಗಣಿಸಲಾಗಿತ್ತು.
ಅಪರಾಧಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಂದು ಏನು ನಡೆಯಿತು ಎಂದು ತನಗೆ ಗೊತ್ತಿಲ್ಲ ಎಂದು ಅಪರಾಧಿ ಮಹಿಳೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾಳೆ. ಕುಡಿತದ ಮತ್ತಿನಲ್ಲಿ ಇಬ್ಬರು ಗೆಳತಿಯರು ಜಗಳವಾಡಿದ ಬಳಿಕ ಈ ಕೊಲೆ ನಡೆದಿರಬೇಕೆಂದು ಹೇಳಲಾಗಿದೆ.







