ಟ್ರಂಪ್‌ರ ‘ಫೇಕ್ ನ್ಯೂಸ್ ಪ್ರಶಸ್ತಿ’ಗಳು ಪ್ರಕಟ!
ಪ್ರಶಸ್ತಿ ವಿಜೇತರು ಯಾರ್ಯಾರು ಗೊತ್ತಾ ?

ವಾಶಿಂಗ್ಟನ್, ಜ. 18: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಬಹುಚರ್ಚಿತ ‘ಫೇಕ್ ನ್ಯೂಸ್ ಪ್ರಶಸ್ತಿ’ಗಳನ್ನು ಬುಧವಾರ ರಾತ್ರಿ ಪ್ರಕಟಿಸಿದ್ದಾರೆ.
ಪ್ರಶಸ್ತಿಯ ಅಗ್ರ 10ರ ಪಟ್ಟಿಯನ್ನು ಟ್ರಂಪ್ ಟ್ವಿಟರ್ ಮೂಲಕ ಪ್ರಕಟಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಪಟ್ಟಿಗೆ ಅವರು ಟ್ವಿಟರ್ ಮೂಲಕ ಲಿಂಕ್ ನೀಡಿದ್ದಾರೆ.
ಈ ಘೋಷಣೆ ಹೊರಬಿದ್ದ ನಿಮಿಷಗಳಲ್ಲೇ ಒತ್ತಡವನ್ನು ಸಹಿಸಲಾಗದೆ ವೆಬ್‌ಸೈಟ್ ಸ್ಥಗಿತಗೊಂಡಿತು.
ಅವರು ಯಾವಾಗಲೂ ಕಿಡಿಗಾರುತ್ತಿರುವ ಸಿಎನ್‌ಎನ್, ದ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಶಿಂಗ್ಟನ್ ಪೋಸ್ಟ್‌ಗಳು ‘ಪ್ರಶಸ್ತಿ ವಿಜೇತ’ರ ಪಟ್ಟಿಯಲ್ಲಿವೆ.
ಪತ್ರಿಕೆಗಳನ್ನು ದುರ್ಬಲಗೊಳಿಸುವ ಹುನ್ನಾರ : ರಿಪಬ್ಲಿಕನ್ ಸೆನೆಟರ್ ಆರೋಪ
‘ಫೇಕ್ ನ್ಯೂಸ್ ಪ್ರಶಸ್ತಿ’ ಘೋಷಣೆಯಾಗುವ ಗಂಟೆಗಳ ಮೊದಲು ಟ್ರಂಪ್ ವಿರುದ್ಧ ವಾಗ್ದಾಳಿ ಮಾಡಿದ ಅವರದೇ ಪಕ್ಷದ ಸೆನೆಟರ್ ಜೆಫ್ ಫ್ಲೇಕ್, ಸ್ವತಂತ್ರ ಪತ್ರಿಕೋದ್ಯಮದ ಮೇಲೆ ಕಳಂಕ ಹೊರಿಸಲು ಹಾಗೂ ದುರ್ಬಲಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ವಾಧಿಕಾರಿ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬುಧವಾರ ಬೆಳಗ್ಗೆ ಸೆನೆಟ್‌ನಿಂದ ಭಾಷಣ ಮಾಡಿದ ಅವರು ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘‘ಟ್ರಂಪ್ ಅವರೇ, ಇದು ನಮ್ಮ ಪ್ರಜಾಪ್ರಭುತ್ವದ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ತನ್ನ ಶತ್ರುಗಳನ್ನು ಬಣ್ಣಿಸಲು ಜೋಸೆಫ್ ಸ್ಟಾಲಿನ್ (ರಶ್ಯದ ಮಾಜಿ ಸರ್ವಾಧಿಕಾರಿ) ಬಳಸಿದ್ದ ಮಾತುಗಳನ್ನೇ ನಮ್ಮ ಅಧ್ಯಕ್ಷರು ಬಳಸುತ್ತಿದ್ದಾರೆ’’ ಎಂದು ಸೆನೆಟರ್ ಅಭಿಪ್ರಾಯಪಟ್ಟರು.







