ಧರ್ಮವನ್ನು ರಾಜಕೀಯ ಲಾಬಕ್ಕೆ ಬಳಸುವ ಕೆಲಸ ಆಗಬಾರದು: ಮುಖ್ಯಮಂತ್ರಿ ಸಿದ್ಧರಾಮಯ್ಯ

ಮೈಸೂರು,(ಸುತ್ತೂರು)ಜ.18: ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಪ್ರಾಯಿಸಿದರು.
ಸುತ್ತೂರಿನ ಜಾತ್ರಾ ಮಹೋತ್ಸವದ ಸಮರೋಪ ಸಮಾರಂಭದಲ್ಲಿ ಗುರುವಾರ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆ ಎಸ್ ಎಸ್ ಜ್ಞಾನ ಸಂಪನ್ಮೂಲ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿ ತಯಾರಿಕೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಹೆಬ್ಬೆಟ್ ರಾಮಕ್ಕ ಸಿಡಿ ಬಿಡುಗಡೆ ಮಾಡಿದರು. ಇದೇ ವೇಳೆ ಕೃಷಿ ಮೇಳ,ವಸ್ತು ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ನಂತರ ಮಾತನಾಡಿದರು.
ಧರ್ಮವನ್ನು ರಾಜಕೀಯ ಲಾಭಕ್ಕೆ ಯಾರು ಬಳಸಬಾರದು. ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಇಲ್ಲದಿದ್ದರೇ ಮನುಷ್ಯತ್ವವೇ ಇಲ್ಲದ ರೀತಿ ಆಗುತ್ತದೆ. ಯಾವ ಧರ್ಮದಲ್ಲೂ ಮನುಷ್ಯತ್ವ ಇಲ್ಲದ ರೀತಿ ಇರುವುದಿಲ್ಲ ಎಂದು ಹೇಳಿದರು.
ಜಾತ್ರೆ ಎಂದರೇ ಭಾವೈಕ್ಯತೆಯ ರೂಪ. ಸಮಾಜದಲ್ಲಿ ಭಾವೈಕ್ಯತೆ ಇರಬೇಕು.ಅದಕ್ಕೆ ನಮ್ಮ ಸಂವಿಧಾನದಲ್ಲಿ ಒತ್ತು ಕೊಟ್ಟಿದ್ದಾರೆ.ಭಾರತ ಒಂದು ವಿಶಿಷ್ಟವಾದ ದೇಶ. ಒಂದು ಕಡೆ ಕುವೆಂಪು ಪ್ರತಿಯೊಂದು ಮಗು ಕೂಡ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ ಎಂದಿದ್ದಾರೆ. ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವನಾಗುತ್ತಿದ್ದಾನೆ. ನಾವು ವಿಶ್ವಮಾನವರಾಗಲು ಪ್ರಯತ್ನಿಸಿದರೆ ಸಮಾಜದ ಆಸ್ತಿ ಆಗುತ್ತೇವೆ. ಅಲ್ಪ ಮಾನವರಾದರೆ ಸಮಾಜಕ್ಕೆ ಭಾರವಾಗುತ್ತೇವೆ. ನಾವು ಎಲ್ಲಾ ಧರ್ಮದ ಆಚರಣೆಯಲ್ಲಿ ನಾಡಗೀತೆ ಹಾಡುತ್ತೇವೆ. ಈ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಅದನ್ನು ನಾವು ಉಳಿಸಿಕೊಳ್ಳುತ್ತಿಲ್ಲ. ಇದು ನಿಜಕ್ಕೂ ಅಮಾನವೀಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಜಾತ್ರೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಎಲ್ಲರನ್ನೂ ತಲುಪಲು ಈ ಕ್ಷೇತ್ರ ಇಂತಹ ಜಾತ್ರೆಯನ್ನು ಮಾಡುತ್ತಾ ಬಂದಿದೆ. ಪರಿಣಾಮ ಏನೆಂದರೆ ಜಾತ್ರೆಯಲ್ಲಿ ಭಾಗವಹಿಸುವುದರ ಜೊತೆಗೆ ನನಗೆ ವೈಯುಕ್ತಿಕ ಲಾಭವಾಗಿದೆ. ಧರ್ಮದ ಕುರಿತು ಬಸವಣ್ಣ ಸರಳವಾಗಿ ಹೇಳಿದ್ದಾರೆ. ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ. ದಯೆ ಇಲ್ಲದವ ಮನುಷ್ಯನೇ ಅಲ್ಲ. ನಮಗೋಸ್ಕರ ಧರ್ಮ ಇರುವುದು. ಮನುಷ್ಯ ಮನುಷ್ಯನ ನಡುವೆ ಪರಸ್ಪರ ಪ್ರೀತಿ ಇರಬೇಕು. ಆದರೆ, ಇತ್ತೀಚೆಗೆ ಆ ಪ್ರೀತಿ ಮಾಯವಾಗಿ ದ್ವೇಷ ಬೆಳೆಯುತ್ತಿದೆ.ಅಂತಹ ದ್ವೇಷ ಬಿತ್ತುವವರಿಂದ ಎಚ್ಚರಿಕೆಯಿಂದಿರಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಇದು ನನ್ನ ಕ್ಷೇತ್ರ, ಜಿಲ್ಲೆಯ ಎಲ್ಲಾ ಜನರು ಇದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದಲೇ ನನಗೆ ಈ ಅಧಿಕಾರ ಸಿಕ್ಕಿದ್ದು. ಜನರ ನಿರೀಕ್ಷೆಗೆ ತಕ್ಕಂತೆ ನಾನು ನಡೆದುಕೊಂಡಿದ್ದೇನೆ. ಕಳೆದ ನಾಲ್ಕುವರೆ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದ ಅವರು, ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಮನವಿ ಮಾಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯಾವ ಮನುಷ್ಯನು ಹಸಿದು ಮಲಗಬಾರದು ಎಂದು ಉಚಿತ ಅಕ್ಕಿ ನೀಡುವ ಮೂಲಕ ಅನ್ನಭಾಗ್ಯದಂತಹ ಮಹತ್ತರ ಕಾರ್ಯವನ್ನು ಮಾಡಿದ್ದೇವೆ. ಪಿಯುಸಿ ಪಾಸಾದ 1.80 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್ ನೀಡಲಾಗುವುದು. ಈ ಯೋಜನೆಯಿಂದ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಮಲ್ಲಿಕಾರ್ಜುನಸ್ವಾಮೀಜಿ, ಮುರುಘ ರಾಜೇಂದ್ರ ಸ್ವಾಮೀಜಿ, ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಡಾ.ಗೀತಾ ಮಹದೇವಪ್ರಸಾದ್, ತನ್ವೀರ್ ಸೇಠ್, ಡಾ.ಶರಣಪ್ರಕಾಶ್ ಪಾಟೀಲ್, ಸಂಸದ ಧ್ರುವ ನಾರಾಯಣ್ ಶಾಸಕರಾದ ಕಳಲೆ ಕೇಶವಮೂರ್ತಿ, ಜಯಣ್ಣ, ಎಂ.ಕೆ.ಸೋಮಶೇಖರ್, ಪುಟ್ಟರಂಗಶೆಟ್ಟಿ, ತಾರಾ ಅನುರಾಧ, ಧರ್ಮಸೇನಾ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ, ಮನುಷ್ಯತ್ವ ಇರುವವರು ಹಿಂದೂಗಳು, ಮಾನವೀಯ ಮೌಲ್ಯಗಳಿಗೆ ಗೌರವ ಕೊಡುವ ಕೆಲಸ ಆಗಬೇಕು. ಯಾರೇ ಆದರು ವೈಚಾರಿಕತೆ ಬಿಂಬಿಸುವ ಕೆಲಸವನ್ನು ಮಾಡಬೇಕು. ಕಂದಾಚಾರ, ಮೌಢ್ಯ, ಗೊಡ್ಡು ಸಂಪ್ರದಾಯಗಳನ್ನು ಬಿತ್ತುವ ಕೆಲಸ ಮಾಡಬಾರದು.
-ಸಿದ್ಧರಾಮಯ್ಯ







