ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಪುಣ್ಯಕ್ಷೇತ್ರಕ್ಕೆ ಶತಮಾನೋತ್ಸವ ಸಂಭ್ರಮ: ಜ.20ರಂದು ಸರ್ವ ಧರ್ಮ ಸಮ್ಮೇಳನ
ಮಂಗಳೂರು, ಜ. 18: ಉಳ್ಳಾಲದ ತೊಕ್ಕೋಟು ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಪುಣ್ಯಕ್ಷೇತ್ರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ.
ಜ.19, 20, 21ರಂದು ಸಂತ ಸೆಬೆಸ್ಟಿಯನ್ ದೇವಾಲಯದ ಶತಮಾನೋತ್ಸವ ಆಚರಿಸಲ್ಪಡುತ್ತಿದೆ. ಜ. 19ರಂದು ಸಮೂಹ ಸಂಸ್ಥೆಗಳಲ್ಲಿ ಕಲಿಯುತ್ತಿರುವ 3000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸೇರಿ ಈ ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು.
ವಿದಾರ್ಥಿಗಳಿಂದ ಸಂತ ಸೆಬೆಸ್ಟಿಯನ್ ಜೀವನವನ್ನಾಧಾರಿತ ನೃತ್ಯ ರೂಪಕ ಸಾದರಪಡಿಸಲಾಗುವುದು. ಜ.20ರಂದು ನಡೆಯುವ ಸರ್ವ ಧರ್ಮ ಸಮ್ಮೇಳನದಲ್ಲಿ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ಸೇರಂಪೊರ್ ಯುನಿವರ್ಸಿಟಿಯ ಉಪಕುಲಪತಿ ಅತೀ ವಂದನೀಯ ಜಾನ್ ಎಸ್.ಸದಾನಂದ ಹಾಗೂ ಬಶೀರ್ ಮದನಿ ಕೂಳೂರು ಅವರು ಸೌಹಾರ್ಧ ಸಂದೇಶವನ್ನು ನೀಡಲಿದ್ದಾರೆ. ಮಂಗಳೂರು ಕಥೊಲಿಕ್ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಜ.21ರಂದು ನಡೆಯಲಿರುವ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಪೂಜಾ ವಿಧಿಗಳನ್ನು ನೆರವೇರಿಸಲಿ ದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಯು.ಟಿ.ಖಾದರ್ ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿಸೋಜ, ಹುಸೈನ್ ಕುಂಜಿಮೋನು, ಅತೀ ವಂದನೀಯ ಡೆನಿಸ್ ಮೊರಸ್ ಪ್ರಭು ಅವರ ಸಹಿತ ಅನೇಕ ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಚರ್ಚ್‌ನ ಪ್ರಕಟನೆ ತಿಳಿಸಿದೆ.
ನಡೆದು ಬಂದ ದಾರಿ
19ನೆ ಶತಮಾನದಲ್ಲಿ ಪೆರ್ಮನ್ನೂರು-ತೊಕ್ಕೋಟು-ಉಳ್ಳಾಲ ಪರಿಸರದ ಜನರು, ಪಾಣೀರ್ ಇಗರ್ಜಿಯಲ್ಲಿ ದೇವರನ್ನು ಆರಾಧಿಸುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ ಜನರ ಅನುಕೂಲಕ್ಕೋಸ್ಕರ ಬಬ್ಬು ಕಟ್ಟೆಯಲ್ಲಿ ಒಂದು ಚಿಕ್ಕ ಇಗರ್ಜಿಯನ್ನು ಕಟ್ಟಲಾಯಿತು.
1913ರಲ್ಲಿ ಚರ್ಚ್ ಕಟ್ಟುವ ಈ ಕೆಲಸ ಆರಂಭವಾಗಿದ್ದರೂ 1918 ಫೆಬ್ರವರಿ 1ನೆ ತಾರೀಕಿನಂದು ಮಂಗಳೂರು ಧರ್ಮ ಕ್ಷೇತ್ರದ ಬಿಷಪರಿಂದ ಈ ಚರ್ಚಿಗೆ ಅಧಿಕೃತ ಮಣ್ಣನೆಯನ್ನು ನೀಡಲಾಗಿ ವಂ.ಫಾ. ಎಸ್. ವಿ. ರೆಬೆಲ್ಲೊ ಅವರನ್ನು ಈ ಚರ್ಚಿನ ಚಾಪ್ಲೈನ್‌ರಾಗಿ ನೇಮಿಸಲಾಯಿತು.
ಪೆರ್ಮನ್ನೂರು ಪರಿಸರದ ಭಕ್ತಾದಿಗಳಿಗೆ ಆರಾಧನೆಯಲ್ಲಿ ಪಾಲ್ಗೊಳ್ಳಲು ಇನ್ನೂ ಹೆಚ್ಚು ಸುಲಭವಾಗಲು ಬಬ್ಬು ಕಟ್ಟೆಯಲ್ಲಿದ್ದ ಪ್ರಾರ್ಥನಾ ಮಂದಿರವನ್ನು ತೊಕ್ಕೊಟ್ಟಿಗೆ ಸ್ಥಳಾಂತರಿಸಲಾಯಿತು. ಕಳೆದ 100 ವರ್ಷಗಳಲ್ಲಿ ತೊಕ್ಕೊಟುನ ಈ ಪರಿಸರದಲ್ಲಿ ಜನರ ಏಳಿಗೆಗೆ ಈ ಚರ್ಚ್ ಕಾರಣವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
1928ನೆ ಇಸಯಲ್ಲಿ ಈ ಪರಿಸರದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳಿಲ್ಲದ ಸಂದರ್ಭದಲ್ಲಿ, ಹೋಲಿ ಏಂಜಲ್ಸ್ ಹಿರಿಯ ಪ್ರಾರ್ಥುಕ ಶಾಲೆ ಆರಂಭವಾಯಿತು. ಇಂದಿಗೂ ಈ ಕನ್ನಡ ಮಾಧ್ಯಮ ಶಾಲೆಯಲ್ಲಿ 500 ಕ್ಕೂ ಮಿಕ್ಕಿ ವಿದ್ಯಾಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. 7931ರಲ್ಲಿ ಬೆಥನಿ ಧರ್ಮ ಭಗಿನಿಯರ ಕಾನ್ವೆಂಟನ್ನು ಆರಂಭಿಸಲಾಯಿತು. 1932ರಲ್ಲಿ ಹೊಸ ಚರ್ಚ್ ಕಟ್ಟಡವನ್ನು ನಿರ್ಮಿಸಲಾಯಿತು. 1937ರಲ್ಲಿ ಬಡಬಗ್ಗರಿಗೆ ಆಧಾರ ನೀಡಲು ಸಂತ ವಿನ್ಸೆಂಟ್ ಪೌಲ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. 1940ರಲ್ಲಿ ಜನರ ಅಭಿವೃದ್ಧಿಯ ನಿಟ್ಟಿನಲ್ಲಿ ಪೆರ್ಮನ್ನೂರ್ ಕೊ ಒಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲಾಯಿತು. 1940ರಲ್ಲಿ ಶಾಲಾ ಮಕ್ಕಳಿಗೋಸ್ಕರ ಕುಡಿಯುವ ನೀರನ್ನು ಪೂರೈಸಲು ಬಾವಿಯನ್ನು ಕೊರೆಯಲಾಯಿತು. 1943ರಲ್ಲಿ ಉಳ್ಳಾಲ ಹೊಗೆಯಲ್ಲಿ ಟ್ರೈ ಐಲ್ಯಾಂಡ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. 1958ರಲ್ಲಿ ಆಡಂ ಕುದ್ರುನಲ್ಲಿ ಸಂತ ಸೆಬೆಸ್ಟಿಯನ್ ಹಿರಿಯ ಪ್ರಾರ್ಥಮಿಕ ಶಾಲೆಯನ್ನು ಸ್ಥಾಪಿಸಲಾಯಿತು. 1968ರಲ್ಲಿ ಯುವಜನರ ಏಳಿಗೆಗಾಗಿ ಗಾರ್ಲೆಂಡ್ ಕ್ಲಬ್ ಪೆರ್ಮನ್ನೂರು, ಯಂಗ್ ಬ್ರದರ್ಸ್ ಕ್ಲಬ್ ಉಳ್ಳಾಲ ಹಾಗೂ ಸಂತ ಸೆಬೆಸ್ಟಿಯನ್ ಯೂನಿಯನ್ ಆಡಂ ಕುದ್ರು ಎಂಬ ಮೂರು ಯುವ ಸಂಸ್ಥೆಗಳನ್ನು ರಚಿಸಲಾಯಿತು. 1974ರಲ್ಲಿ ಮಳೆ ಹಾಗೂ ವಿಶೇಷ ನೆರೆಯ ಕಾರಣದಿಂದ ಈ ಪ್ರದೇಶದ ಜನರು ನಿರಾಶ್ರಿತರಾದಾಗ ಜಾತಿ, ಭೇದವಿಲ್ಲದೆ ಸಂತ ಸೆಬೆಸ್ಟಿಯನ್ ಚರ್ಚ್‌ನಲ್ಲಿ ಆಶ್ರಯವನ್ನು ಪಡೆದರು. 1983ರಲ್ಲಿ ಸಂತ ಸೆಬೆಸ್ಟಿಯನ್ ಹೈಸ್ಕೂಲ್ ಪ್ರಾರಂಭಗೊಂಡಿತು. 1993ರಲ್ಲಿ ಪೆರ್ಮನ್ನೂರಿನಲ್ಲಿ ಚರ್ಚ್ ಸ್ಥಾಪನೆಯ ಪ್ಲಾಟಿನಮ್ ಜುಬಿಲಿಯನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಇಲ್ಲಿ ಯ ಇಗರ್ಜಿಗೆ ಈಗಿರುವ ಹೊಸ ಕಟ್ಟಡವನ್ನು ಸ್ಥಾಪಿಸಲಾಯಿತು. 1996ರಲ್ಲಿ ಸಿ.ಒ.ಡಿ.ಪಿ. ಸಂಸ್ಥೆಯ ಆಶ್ರಯದಲ್ಲಿ ಕ್ರೆಡಿಟ್ ಯೂನಿಯನ್ ಸೊಸೈಟಿ ಹಾಗೂ ಟೈಲರಿಂಗ್ ಕ್ಲಾಸುಗಳನ್ನು ಆರಂಭಿಸಲಾಯಿತು. 2000ನೇ ಇಸಯಲ್ಲಿ ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಲಾಯಿತು. 2000ರಲ್ಲಿ ಸಂತ ಸೆಬೆಸ್ಟಿಯನ್ ಪಿ.ಯು. ಕಾಲೇಜು ಸ್ಥಾಪಿಸಲಾಯಿತು. 2010ರಲ್ಲಿ ಆಡಂ ಕುದ್ರುನಲ್ಲಿ ಸಂತ ಸೆಬೆಸ್ಟಿಯನ್ನರ ನೂತನ ಪ್ರಾರ್ಥನಾಲಯವನ್ನು ಕಟ್ಟಲಾಯಿತು. 2012ನೇ ಇಸಯಲ್ಲಿ ಸಂತ ಸೆಬೆಸ್ಟಿಯನ್ ಹೈಸ್ಕೂಲ್ ಹಾಗೂ ಪಿ.ಯು. ಕಾಲೇಜಿಗೆ ಹೊಸ ಸಭಾಂಗಣವನ್ನು ನಿರ್ಮಿಸಲಾಯಿತು. 2013ರಲ್ಲಿ ಬಡ ರೋಗಿಗಳಿಗೋಸ್ಕರ ಮೆಡಿಕಲ್ ಫಂಡನ್ನು ಸ್ಥಾಪಿಸಲಾಯಿತು. 2015ರಲ್ಲಿ ಬಡ ಮಕ್ಕಳಿಗೆ ಆಧಾರಾವಾಗಿ ಶಿಕ್ಷಣ ನಿಧಿಯನ್ನು ಸ್ಥಾಪಿಸಲಾಯಿತು. 2015ರಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡವನ್ನು ವಿಸ್ತರಿಸಲಾಯಿತು.
ಸಮೂಹ ವಿದ್ಯಾ ಸಂಸ್ಥೆಗಳುಸಂತ ಸೆಬೆಸ್ಟಿಯನ್ ಸಮೂಹ ಸಂಸ್ಥೆಗಳು ಪರಿಸರದಲ್ಲಿ ಪ್ರಸಿದ್ದಿ ಪಡೆದಿವೆ. ಹೋಲಿ ಏಂಜಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1,200 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಸಂತ ಸೆಬೆಸ್ಟಿಯನ್ ಪ್ರೌಡ ಶಾಲೆಯಲ್ಲಿ 500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಸಂತ ಸೆಬೆಸ್ಟಿಯನ್ ಪಿ.ಯು. ಕಾಲೇಜಿನಲ್ಲಿ 600ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಸಂತ ಸೆಬೆಸ್ಟಿಯನ್ ಡಿಗ್ರಿ ಕಾಲೇಜಿನಲ್ಲಿ 300ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. 3000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿರುವ ಸಂತ ಸೆಬೆಸ್ಟಿಯನ್ ವಿದ್ಯಾ ಸಂಸ್ಥೆಗಳು ಉತ್ತಮ ಫಲಿತಾಂಶದೊಡನೆ ಮಕ್ಕಳಿಗೆ ಸರ್ವ ರೀತಿಯ ನೈತಿಕ ಆಧ್ಯಾತ್ಮಿಕ ಹಾಗೂ ವ್ಯಕ್ತಿತ್ವದ ಬೆಳವಣಿಗೆಯ ಕಡೆಗೆ ಗಮನವನ್ನು ನೀಡುತ್ತಿದೆ. ಈ ಸಮೂಹ ಸಂಸ್ಥೆಗಳಲ್ಲಿ 150ಕ್ಕೂ ಮಿಕ್ಕಿ ಅಧ್ಯಾಪಕರಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







