ನಾನು ಮೋದಿ, ಅಮಿತ್ ಶಾ, ಹೆಗಡೆಯ ವಿರೋಧಿ.. ಇವರ್ಯಾರೂ ಹಿಂದೂಗಳಲ್ಲ: ಪ್ರಕಾಶ್ ರೈ

ಹೊಸದಿಲ್ಲಿ, ಜ.18: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿರುವ ನಟ, ನಿರ್ದೇಶಕ ಪ್ರಕಾಶ್ ರೈ. “ನನ್ನನ್ನು ಅವರು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ನಾನು ಮೋದಿಯ ವಿರೋಧಿ, ಅಮಿತ್ ಶಾ ವಿರೋಧಿ ಮತ್ತು ಹೆಗಡೆ ವಿರೋಧಿಯಾಗಿದ್ದೇನೆ. ಇವರ್ಯಾರೂ ಹಿಂದೂಗಳಲ್ಲ. ಕೊಲೆಯನ್ನು ಬೆಂಬಲಿಸುವ ಯಾರೂ ಹಿಂದೂಗಳಲ್ಲ ಎಂದು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ‘ಇಂಡಿಯಾ ಟುಡೆ ಕಾಂಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಗೌರಿ ಲಂಕೇಶ್ ರ ಹತ್ಯೆಯಾದಾಗ ಕೆಲವರು ಸಂಭ್ರಮಿಸಿದರು. ಇಂತಹವರನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ. ನಾನು ಅವರಿಗೆ ಮತ ನೀಡಿದ್ದೇನೋ ಅಥವಾ ಇಲ್ಲವೋ, ಅವರು ನನ್ನ ಪ್ರಧಾನಮಂತ್ರಿಯೇ. ಇಂತಹವರ ಬಗ್ಗೆ ಪ್ರಧಾನಿ ಮಾತನಾಡಲೇಬೇಕು. ಸಂವಿಧಾನ ಬದಲಾವಣೆಗೆ ನಾವು ಬಂದಿದ್ದೇವೆ ಎಂದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು
“ಒಬ್ಬ ಚುನಾಯಿತ ಜನಪ್ರತಿನಿಧಿ ಒಂದು ಧರ್ಮವನ್ನು ಭೂಮಿಯಿಂದಲೇ ಅಳಿಸಿ ಹಾಕಬೇಕು ಎನ್ನುತ್ತಾರೆ. ತಮ್ಮ ಸಚಿವರಿಗೆ ಈ ಬಗ್ಗೆ ಪ್ರಧಾನಿ ಎಚ್ಚರಿಕೆ ನೀಡಬೇಕು. ತಮ್ಮ ಸಚಿವರು ಬಾಯ್ಮುಚ್ಚುವಂತೆ ಪ್ರಧಾನಿ ಹೇಳದಿದ್ದರೆ ಅವರು ಹಿಂದೂವಲ್ಲ ಎಂದು ನಾನು ಹೇಳುತ್ತೇನೆ. ಏಕೆಂದರೆ ಕೊಲೆಗಳನ್ನು ಬೆಂಬಲಿಸುವ ವ್ಯಕ್ತಿ ಹಿಂದೂ ಆಗಲಾರ” ಎಂದು ಪ್ರಕಾಶ್ ರೈ ಹೇಳಿದರು.