ನಮ್ಮದು ಹಗರಣ ಮುಕ್ತ ಸರ್ಕಾರ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮೈಸೂರು,ಜ.18: ನಮ್ಮ ಸರ್ಕಾರ ಹಗರಣ ಮುಕ್ತ ಸರ್ಕಾರವಾಗಿದ್ದು, 4 ವರ್ಷ 8 ತಿಂಗಳ ಅಧಿಕಾರದ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಬಾರದ ಹಾಗೇ ಸ್ಥಿರ ಸರ್ಕಾರ ಮತ್ತು ಪರಿಣಾಮಕಾರಿ ಆಡಳಿತ ಕೊಟ್ಟಿದ್ದೇವೆ ಎಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸುತ್ತೂರು ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸುತ್ತೂರು ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.ಸುತ್ತೂರು ಶ್ರೀ ಕ್ಷೇತ್ರ ಇದು ಒಂದು ಜಾತ್ರೆ ಇಲ್ಲ, ವೈಜ್ಞಾನಿಕವಾಗಿ, ಕೃಷಿ ಸಂಬಂಧಪಟ್ಟ ಹಾಗೇ ಅವಿಷ್ಕಾರ ಮಾಡಲು ಪ್ರೋತ್ಸಾಹ, ಉತ್ತೇಜನ ನೀಡುತ್ತಾ ಬಂದಿದೆ. ಧಾರ್ಮಿಕವಾಗಿ, ಔದ್ಯೋಗಿಕವಾಗಿ,ಕಲೆ,ಸಾಹಿತ್ಯ, ಸಾಂಸ್ಕೃತಿಕವಾಗಿ ಎಲ್ಲರನ್ನೂ ಒಂದು ಕಡೆ ಸೇರಿಸಿ ಸಮೃದ್ಧ ನಾಡನ್ನು ಕಟ್ಟಲು ಈ ಕ್ಷೇತ್ರ ಮುಂದಾಗಿದೆ .ಸಾರ್ಥಕ ಸೇವೆ ಮಾಡಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಮೂರು ಎಕರೆ ಭೂಮಿಯಲ್ಲಿ ಸುಮಾರು 160 ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆದಿದ್ದಾರೆ. ಈ ಕೃಷಿ ಮಾದರಿ ರೈತರಿಗೆ ಅನುಕೂಲಕರವಾಗಿದೆ. ಹಾಗೆಯೇ ಸುತ್ತೂರು ಮಠದಲ್ಲಿನ ಕೃಷಿ ಮೇಳದಲ್ಲಿ ಎಲ್ಲಾ ಸರ್ಕಾರದ ಸಾಧನೆಗಳನ್ನು ಈ ಮಠ ಯಾವುದೇ ಒಂದು ಪಕ್ಷಪಾತ ಇಲ್ಲದೇ ಪ್ರದರ್ಶಿಸಿದೆ. ಸುತ್ತೂರು ಶ್ರೀಗಳ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹೇಳಿದರು.
ಈ ಸಂದರ್ಭ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಹೆಚ್.ಕೆ.ಪಾಟೀಲ್,ಡಾ.ಗೀತಾ ಮಹದೇವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.





