ಬೈಕ್ ಢಿಕ್ಕಿ: ಗಾಯಾಳು ಸ್ಕೂಟರ್ ಸವಾರ ಮೃತ್ಯು
ಪುತ್ತೂರು, ಜ. 18: ನಗರದ ಹೊರವಲಯದ ಕೂರ್ನಡ್ಕ ಎಂಬಲ್ಲಿ ಬುಧವಾರ ಸ್ಕೂಟರ್‌ಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಗಂಭಿರ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಮೂಲತಃ ಭಟ್ಕಳದವರಾಗಿದ್ದು, ಪಾನೀಯ ನಿಗಮದ ಉದ್ಯೋಗಿಯಾಗಿರುವ ಪುತ್ತೂರು ನಗರದ ಕೆಮ್ಮಿಂಜೆ ಗ್ರಾಮದ ಸಂಜಯನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಮಂಜುನಾಥ ಖಾರ್ವಿ (58) ಮೃತಪಟ್ಟವರು.
ಕರ್ನಾಟಕ ಪಾನೀಯ ನಿಗಮದಲ್ಲಿ ಅಸಿಸ್ಟೆಂಟ್ ಮನೇಜರ್ ಆಗಿದ್ದ ಮಂಜುನಾಥ ಖಾರ್ವಿ ಅವರು ಬುಧವಾರ ತನ್ನ ಸ್ಕೂಟರ್‌ನಲ್ಲಿ ಊಟಕ್ಕೆ ತೆರಳುತ್ತಿದ್ದ ವೇಳೆ ಕೂರ್ನಡ್ಕ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯ ಸಮೀಪ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದರು.
ಮಂಜುನಾಥ ಖಾರ್ವಿ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್‌ಗೆ ವಿನೀತ್ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಢಿಕ್ಕಿ ಹೊಡೆದಿತ್ತು.
ಗಾಯಾಳು ಮಂಜುನಾಥ ಖಾರ್ವಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಸಂಬಂಧಿ ಸುಭಾಸ್ ಎಂಬವರು ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





