ಎ.ಆರ್.ಕೆ. ಶಾಲಾ ತಡೆ ಗೋಡೆ ಧ್ವಂಸದ ವಿರುದ್ಧ ‘ಬೆಂಗರೆ ನಾಗರಿಕ ಒಕ್ಕೂಟ’ದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ

ಮಂಗಳೂರು, ಜ. 18: ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್‌ವೆಲ್‌ಫೇರ್ ಸೆಂಟರ್ ಅಧೀನದ ಎ.ಆರ್.ಕೆ. ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು ಖಂಡಿಸಿ ‘ಬೆಂಗರೆ ನಾಗರಿಕ ಒಕ್ಕೂಟ’ದ ವತಿಯಿಂದ ಗುರುವಾರ ಕಡವಿನ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು.
ಮುಸ್ಲಿಂ ಅಲ್ಪಸಂಖ್ಯಾತ ಎ.ಆರ್.ಕೆ. ಶಾಲೆಯ ಧ್ವಂಸಗೊಳಿಸಲಾದ ಆವರಣ ಗೋಡೆಯನ್ನು ಮೊದಲಿನಂತೆ ನಿರ್ಮಿಸಿ ಹಾಗೂ ಶಾಲೆ ಶಾಶ್ವತ ನೆಲೆಯಲ್ಲಿ ಮಕ್ಕಳ ಆಟದ ಮೈದಾನದ ಜಮೀನನ್ನು ಕಂದಾಯ ಇಲಾಖೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಶಾಸಕರ ಕಚೇರಿ ಎದುರು ಮುತ್ತಿಗೆಯ ಎಚ್ಚರಿಕೆ
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಶಾಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಶಾಸಕ ಜೆ.ಆರ್. ಲೋಬೋ ಅವರ ಕಚೇರಿಗೆ ಮುತ್ತಿಗೆ ಹಾಕಿ ಅವರ ನಿವಾಸದ ಎದುರು ಧರಣಿ ಕೂರುವುದಾಗಿ ಡಿವೈಎಫ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದರು.
ಕಳೆದ ಹಲವು ವರ್ಷಗಳಿಂದ ಬೆಂಗರೆಯ ಎ.ಆರ್.ಕೆ. ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಬಡವರ ಪಾಲಿನ ಈ ವಿದ್ಯಾಸಂಸ್ಥೆಯ ತಡೆಗೋಡೆಯನ್ನು ಕೆಡವಿಸುವುದರ ಹಿಂದೆ ಶಾಸಕರ ಷಡ್ಯಂತ್ರ ಅಡಗಿದ್ದು, ಇದು ತೀರಾ ಖಂಡನೀಯ. ಶಾಲೆಗೆ ನ್ಯಾಯ ಸಿಗದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಬೆಂಗರೆಯ ಜನತೆ ಜಾತಿ, ಧರ್ಮ, ಭಾಷೆಯನ್ನು ಮೀರಿ ಐಕ್ಯತೆಯಿಂದಿದ್ದು, ಈ ಐಕ್ಯತೆಯನ್ನು ನಾಶಪಡಿಸುವ ಹಾಗೂ ಅವರ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಎಂದೂ ಅವಕಾಶ ನೀಡುವುದಿಲ್ಲ. ಬೆಂಗರೆಯ ಜನರ ಐಕ್ಯತೆಯೊಂದಿಗೆ ಹೋರಾಟವನ್ನು ಮುಂದುವರಿಸುವುದಾಗಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಮಾಜಿ ಮೇಯರ್ ಕೆ. ಅಶ್ರಫ್, ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ, ಡಿವೈಎಫ್‌ಐ ಬೆಂಗರೆ ಸಮಿತಿ ಅಧ್ಯಕ್ಷ ಎ.ಬಿ.ನೌಶಾದ್, ಮಯ್ಯದ್ದಿ ಬೆಂಗರೆ, ಮೋನಾಕ ಬೆಂಗರೆ, ಎ.ಆರ್.ಕೆ. ಶಾಲಾ ಸಂಚಾಲಕ ಇಬ್ರಾಹೀಂ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.







