ಜಾತಿ, ಧರ್ಮದ ಹೆಸರಲ್ಲಿ ಯುವಶಕ್ತಿಯ ದುರ್ಬಳಕೆ ಸಲ್ಲದು: ಸಾಹಿತಿ ಜಯಂತ್ ಕಾಯ್ಕಿಣಿ
ಗ್ರಂಥ ಬಿಡುಗಡೆ-ಮುಕ್ತ ಸಂವಾದ

ಅಂಕೋಲಾ, ಜ.18: ತರುಣ ಪೀಳಿಗೆ ಸಾಂಸ್ಕೃತಿಕ ಸಂವೇದನಾರಹಿತವಾಗಿ ಬೆಳೆಯುತ್ತಿರುವುದರಿಂದ ಸಮಾಜದಲ್ಲಿನ ವಿಭಜಕ ಶಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಯುವಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವುದು ಸರಿಯಲ್ಲ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಕರ್ನಾಟಕ ಸಂಘ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಗ್ರಂಥ ಬಿಡುಗಡೆ ಮತ್ತು ಮುಕ್ತ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕೆಲವೇ ಬುದ್ಧಿವಂತರು ಸೇರಿಕೊಂಡು ಇನ್ನಷ್ಟು ಬುದ್ಧಿವಂತರಾಗಲು ಪ್ರಯತ್ನಿಸುವುದು ಸಾಹಿತ್ಯ ವಲಯದಲ್ಲಿ ಸಲ್ಲದು. ಅತ್ಯುತ್ತಮ ಕೃತಿಗಳ ಸಾರವನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಭಿರುಚಿ ಮೂಡಿಸಬೇಕು ಎಂದು ಹೇಳಿದರು.
ಸಾಂಸ್ಕೃತಿಕ ವಲಯ ವಿಸ್ತಾರವಾಗಿ ಎಲ್ಲ ಸ್ತರಗಳ ಜನರನ್ನು ಒಳಗೊಳ್ಳಬೇಕು. ಈ ಮೂಲಕ ಸಾಮೂಹಿಕ ಜಾಣ್ಮೆಯನ್ನು ಸೃಷ್ಟಿಸಬೇಕು. ಆಗ ಮಾತ್ರ ಯುವಶಕ್ತಿ ಸೃಜನಶೀಲವಾಗಲು, ಚಲನಶೀಲತೆ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದರು.
ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಗ್ರಂಥ ಬಿಡುಗಡೆ: ಕರ್ನಾಟಕ ಸಂಘ ಈ ಹಿಂದೆ ಏರ್ಪಡಿಸಿದ್ದ ಎರಡು ಕವಿಗೋಷ್ಠಿಗಳಲ್ಲಿ ಕವಿಗಳು ವಾಚಿಸಿದ್ದ ಕವಿತೆಗಳ ‘ಶ್ರಾವಣ ಸಂಭ್ರಮ’ ಎಂಬ ಸಂಕಲನವನ್ನು ಪ್ರಕಟಿಸಿದೆ. ಈ ಕೃತಿಯನ್ನು ಇದೇ ಸಂದರ್ಭದಲ್ಲಿ ಜಯಂತ ಅನಾವರಣಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಕೆ.ವಿ.ನಾಯಕ ಮಾತನಾಡಿ, ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತಾಹಿಸುವ ಅಗತ್ಯವಿದೆ ಎಂದರು.
ಕೃತಿಯ ಸಂಪಾದಕ ಎನ್.ವಿ. ನಾಯಕ ಕೃತಿ ಕುರಿತು ಮಾತನಾಡಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಯಂತ್ ಅವರೊಂದಿಗೆ ಸಾಹಿತ್ಯ ಸಂವಾದ ನಡೆಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಅರವಿಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿ ಸ್ವಸ್ತಿಕ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವಿ ಗೌಡ ಸ್ವಾಗತಿಸಿದರು. ಉಪನ್ಯಾಸಕ ಮಹೇಶ ನಾಯಕ ಪರಿಚಯಿಸಿದರು. ಎಸ್.ಆರ್. ನಾಯಕ ನಿರೂಪಿಸಿ, ಕರ್ನಾಟಕ ಸಂಘದ ಕಾರ್ಯದರ್ಶಿ ಉಲ್ಲಾಸ ಹುದ್ದಾರ ವಂದಿಸಿದರು.







