ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಅಂಚೆ ಚೀಟಿ ಬಿಡುಗಡೆ

ಉಡುಪಿ, ಜ.18: ಸಂತ ಲಾರೆನ್ಸರ ಪುಣ್ಯ ಕ್ಷೇತ್ರವನ್ನು ಕ್ರಿಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಸಂತ ಲಾರೆನ್ಸ್ ಮಹಾದೇವಾಲಯವನ್ನು ಬಸಿಲಿಕ ಎಂದು ಅಧಿಕೃತ ಘೋಷಣೆ ಮಾಡಿದ ಸವಿನೆನೆಪಿಗಾಗಿ ಕೇಂದ್ರ ಸರಕಾರದ ಅಂಚೆ ಇಲಾಖೆ ಹೊರತಂದ ಸಂತ ಲಾರೆನ್ಸ್ ಪವಾಡ ಮೂರ್ತಿ ಇರುವ 5 ರೂ. ಮೊತ್ತದ ವಿಶೇಷ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆಯನ್ನು ಗುರುವಾರ ಅತ್ತೂರು ಸಂತ ಲಾರೆನ್ಸರ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು.
ಈ ವಿಶೇಷ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆಯನ್ನು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಕ್ ಲೋಬೊ, ಬೆಂಗಳೂರಿನ ದಕ್ಷಿಣ ಕರ್ನಾಟಕ ವಲಯ ಐಪಿಒಎಸ್ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಹಾಗೂ ಸಂತ ಲಾರೆನ್ಸ್ ಮಹಾ ದೇವಾಲಯದ ರೆಕ್ಟರ್ ವಂ.ಜಾರ್ಜ್ ಡಿಸೋಜ ಜಂಟಿಯಾಗಿ ಬಿಡುಗಡೆ ಗೊಳಿಸಿದರು.
ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾ ಹಾಗೂ ಪವಾಡ ಮೂರ್ತಿಯ ವಿಶೇಷ ಕವರ್ ಹಾಗೂ ಬಸಿಲಿಕಾ ಲಾಂಛನದ ಕ್ಯಾನ್ಸಲೇಶನ್(ಮೊಹರು) ಬಿಡುಗಡೆಯಾಗಲಿದ್ದು, ಇವುಗಳು ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿವೆ. ಅಂಚೆ ಲಕೋಟೆಗೆ ಬಳಸಬಹುದಾದ ಸಂತ ಲಾರೆಸ್ಸ್ ಬಸಿಲಿಕಾ ಮತ್ತು ಪವಾಡ ಮೂರ್ತಿಯ ಭಾವಚಿತ್ರವುಳ್ಳ ಮೈ ಸ್ಟ್ಯಾಂಪ್(5 ರೂ. ಅಂಚೆ ಚೀಟಿ) ಕೂಡ ಈ ಸಂದರ್ಭ ಬಿಡುಗಡೆಯಾಗಲಿದೆ.
ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯದ ಕ್ಯುರೇಟರ್ ಎಂ.ಕೆ. ಕೃಷ್ಣಯ್ಯ, ಬಾಸಿಲಿಕಾದ ಸಹಾಯಕ ಧರ್ಮಗುರು ವಂ. ಜಾನ್ಸಿಲ್ ಆಲ್ವಾ, ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ, ಚಾನ್ಸಲರ್ ವಂ ವಲೇರಿಯನ್ ಮೆಂಡೊನ್ಸಾ ಮೊದಲಾದವರು ಉಪಸ್ಥಿತರಿದ್ದರು.







