ಕೊಳ್ಳೇಗಾಲ: ನೂತನ ಜವಳಿ ನೀತಿಯ ಯೋಜನೆಗಳ ಅರಿವು ಕಾರ್ಯಾಗಾರ

ಕೊಳ್ಳೇಗಾಲ.ಜ.18: ನೇತಾರರ ಹಿತರಕ್ಷಣಾದ ಸಲುವಾಗಿ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದು ಪ್ರತಿಯೊಬ್ಬ ನೌಕರರು ಅಭಿವೃದ್ಧಿ ಹೊಂದಬೇಕು ಎಂದು ನಗರಸಭೆ ಅಧ್ಯಕ್ಷ ಶಾಂತರಾಜು ಅವರು ಹೇಳಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ನೂತನ ಜವಳಿ ನೀತಿಯ ಯೋಜನೆಗಳ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದವರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಗುಡಿ ಕೈಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅತಂಹ ಜನರು ಹೆಚ್ಚಿನ ತರಬೇತಿ ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ನಂತರ ಬೆಂಗಳೂರು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೆಶಕ ಎ.ಸುರೇಶ್‍ಕುಮಾರ್ ಮಾತನಾಡಿ, ಹಿಂದುಳಿದ ಪ್ರದೇಶಗಳಲ್ಲಿ ನಿರ್ದಿಷ್ಟ ಜವಳಿ ವಲಯಗಳ ಅಭಿವೃದ್ದಿಗಾಗಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಸ್ಥಳವನ್ನು ಗುರುತಿಸಿ ಉತ್ತಮ ಆರ್ಥಿಕ ಚಟುವಟಿಕೆಗಳನ್ನು ಹೊಂದಲು ಜವಳಿ ಕ್ಷೇತ್ರದಲ್ಲಿ ಪ್ರಸುತ್ತ ಪರಿಸರದ ಅಭಿವೃದ್ಧಿ ಕಡೆಗೆ ಗುರಿಯಿಡುತ್ತದೆ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ನಿರ್ದಿಷ್ಟ ಜವಳಿ ವಲಯಗಳ ರೂಪದಲ್ಲಿ ಜವಳಿ ಕ್ಷೇತ್ರದಲ್ಲಿ ಬೃಹತ್ ಹೊಡಿಕೆಗಳು ತರಲು, ಅಂತಹ ವಲಯಗಳಲ್ಲಿ ಪಾರ್ಕುಗಳ ಹಾಗೂ ಘಟಕಗಳ ಅಭಿವೃದ್ಧಿಗಾಗಿ ವಿಶಿಷ್ಟ ಪ್ರೇರಣೆಯನ್ನು ನೀಡಲಾಗುವುದು. ಬಂಡವಾಳ ಹೂಡಿಕೆ,ತಂತ್ರಜ್ಞಾನ ವರ್ಗಾವಣೆ, ಕೌಶಲ್ಯ ಉನ್ನತೀಕರಣ ಮತ್ತು ಸಹಾಯಹಸ್ತದ ಮೂಲಕ ರಾಜ್ಯದಲ್ಲಿ ಜವಳಿ ಕೈಗಾರಿಕೆಯ ಮೌಲ್ಯ ಸರಣಿಯನ್ನು ಭದ್ರತಗೂಳಿಸುವುದು ಮತ್ತು ಈ ಕಾರ್ಯಗಾರವನ್ನು ಹಾಗೂ ಈ ಸೌಲಭ್ಯಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಶಿವಾನಂದ, ನಗರಸಭೆ ಸದಸ್ಯೆ ಕೃಷ್ಣವೇಣಿ, ಕೈಮಗ್ಗ ಮತ್ತು ಜವಳಿ ಜಿಲ್ಲಾಧ್ಯಕ್ಷ ರಾಜಣ್ಣ, ಕೊಳ್ಳೇಗಾಲ ತಾ.ಅಧ್ಯಕ್ಷ ಶಿವಣ್ಣ, ಹನೂರು ತಾ.ಅಧ್ಯಕ್ಷ ರಾಜು, ನಾಗೇಂದ್ರ, ವೆಂಕಟೇಶ್, ಮಧು, ಪರಮೇಶ್ ಇನ್ನಿತರರಿದ್ದರು.







