ಹರ್ಯಾಣ: ನಾಲ್ಕು ದಿನದಲ್ಲಿ ಆರನೇ ಅತ್ಯಾಚಾರ
ಗುರ್ಗಾಂವ್, ಜ.19: ಹರ್ಯಾಣದಲ್ಲಿ ಅತ್ಯಾಚಾರ ಸರಣಿ ಮುಂದುವರಿದಿದ್ದು, ನಾಲ್ಕೇ ದಿನಗಳಲ್ಲಿ ಆರನೇ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಫಾರೂಕ್ ನಗರದಲ್ಲಿ ಅತ್ಯಾಚಾರ ನಡೆದಿದೆ. ಬಾಲಕಿಯನ್ನು ಕಾರಿಗೆ ಎಳೆದುಕೊಂಡು ಇಬ್ಬರು ಅತ್ಯಾಚಾರ ಎಸಗಿದರು ಎಂದು ಹೇಳಲಾಗಿದೆ.
ಹಾಡಹಗಲೇ ಈ ಘಟನೆ ನಡೆದಿದ್ದು, ಅಪರಾಹ್ನ 2ರ ವೇಳೆಗೆ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿ, ಕಾಡು ಪ್ರದೇಶಕ್ಕೆ ಒಯ್ದು ಅತ್ಯಾಚಾರ ಎಸಗಿದ್ದಾರೆ. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಅತ್ಯಾಚಾರ ನಡೆಸಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿನಿ ತನ್ನ ತಂದೆಗೆ ಹೇಳಿದ ಬಳಿಕ ದೂರು ನೀಡಲಾಗಿದೆ.
ಜನವರಿ 13ರಂದು 15 ವರ್ಷದ ದಲಿತ ಬಾಲಕಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ವರದಿಯಾಗುತ್ತಿರುವ ಆರನೇ ಅತ್ಯಾಚರ ಪ್ರಕರಣ ಇದಾಗಿದೆ.
"ಅತ್ಯಾಚಾರಿಗಳು ಘಟನೆ ಬಳಿಕ ಮುಶೈದ್ಪುರ ಗ್ರಾಮದ ಬಳಿ ನಗ್ನಸ್ಥಿತಿಯಲ್ಲಿ ಕಾರಿನಿಂದ ತಳ್ಳಿದರು" ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಹೇಳಿದ್ದಾಳೆ. ಘಟನೆ ಬಗ್ಗೆ ಯಾರಿಗೂ ಮಾಹಿತಿ ನೀಡುವುದಿಲ್ಲ ಎಂದು ಪರಿಪರಿಯಾಗಿ ಬೇಡಿದ ಬಳಿಕ ನನ್ನತ್ತ ಬಟ್ಟೆ ಎಸೆದರು ಎಂದು ಹೇಳಿಕೆ ನೀಡಿದ್ದಾಳೆ.