ಚುನಾವಣಾ ಬಾಂಡ್ನಿಂದ ಪಾರದರ್ಶಕತೆ ಅಸಾಧ್ಯ: ಸಿಇಸಿ

ಹೊಸದಿಲ್ಲಿ, ಜ.19: ರಾಜಕೀಯ ದೇಣಿಗೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಚುನಾವಣಾ ಬಾಂಡ್ ಬಗೆಹರಿಸಲಾರದು. ಆದರೆ ಅದನ್ನು ಸಾಧಿಸುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ಹೇಳಿದ್ದಾರೆ.
ರಾಜಕೀಯ ದೇಣಿಗೆಯನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚುನಾವಣಾ ಬಾಂಡ್ ಪರಿಚಯಿಸಿದ್ದು, ಇದರ ಅನ್ವಯ ರಾಜಕೀಯ ದೇಣಿಗೆ ನೀಡುವ ವ್ಯಕ್ತಿ/ ಸಂಸ್ಥೆ ಅಧಿಕೃತ ಬ್ಯಾಂಕ್ಗಳಿಂದ ಇವುಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಬೇಕಾಗುತ್ತದೆ. ನಿಗದಿತ ಸಮಯಮಿತಿಯಲ್ಲಿ ನೋಂದಾಯಿತ ಖಾತೆಯಿಂದ ಮಾತ್ರ ಇದನ್ನು ಖರೀದಿಸಲು ಅವಕಾಶವಿರುತ್ತದೆ.
"ಇಂಥ ದೇಣಿಗೆಗಳ ಬಗ್ಗೆ ಬ್ಯಾಂಕಿಂಗ್ ತನಿಖೆ ನಡೆಸಲು ಅವಕಾಶವಿದೆ. ಇದು ಸರಿಹಾದಿಯಲ್ಲಿ ಒಂದು ಹೆಜ್ಜೆ. ಇದು ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ನಾನು ಹೇಳಲಾರೆ. ಆ ಬಾಂಡ್ ಮೊದಲು ಚಾಲನೆ ಪಡೆಯಲಿ" ಎಂದು ಅಭಿಪ್ರಾಯಪಟ್ಟರು.
ಮುಂಬರುವ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್ ಚುನಾವಣೆಯಲ್ಲಿ ಚುನಾವಣಾ ಬಾಂಡ್ಗಳ ಬಳಕೆ ಸಾಧ್ಯತೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಗಮನ ಸೆಳೆದಾಗ, ಈಗಾಗಲೇ ಇವುಗಳ ಲಭ್ಯತೆ ಬಗ್ಗೆ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿರುವುದರಿಂದ ಖಂಡಿತವಾಗಿಯೂ ಇದನ್ನು ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಮುನ್ನ ಸಂಸದೀಯ ಸಮಿತಿಗೆ ಪ್ರತಿಕ್ರಿಯೆ ನೀಡಿದ ಚುನಾವಣಾ ಆಯೋಗ, ಸರ್ಕಾರ ಆರಂಭಿಸಿರುವ ಚುನಾವಣಾ ಬಾಂಡ್, ಹಿಮ್ಮುಖ ಹೆಜ್ಜೆ ಎಂದು ಹೇಳಿತ್ತು. ಆದರೆ ಇದೀಗ ಆಯೋಗದ ನಿಲುವು ಬದಲಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಲ್ಲಿ 1000, 10 ಸಾವಿರ, ಒಂದು ಲಕ್ಷ, 10 ಲಕ್ಷ ಮತ್ತು ಒಂದು ಕೋಟಿ ಮುಖಬೆಲೆಯ ಬಾಂಡ್ಗಳು ಲಭ್ಯ.