15 ವರ್ಷದ ಪುತ್ರನನ್ನು ಉಸಿರುಗಟ್ಟಿಸಿ ಕೊಂದ ತಾಯಿ!
ಕೊಲೆಗೆ ಕಾರಣ ಮಾತ್ರ ವಿಚಿತ್ರ

ಕೊಲ್ಲಂ, ಜ.19: ಅಪಹಾಸ್ಯ ಮಾಡಿದ ತನ್ನ ಸ್ವಂತ ಹದಿಹರೆಯದ ಮಗನನ್ನೇ ಕೊಂದ 45 ವರ್ಷದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆಯೆಂದು ಹೇಳಲಾಗುತ್ತಿದೆ.
ಆರೋಪಿ ಜಯ ಮೋಳ್ ಗೃಹಿಣಿಯಾಗಿದ್ದು, ತನ್ನ 15 ವರ್ಷದ ಪುತ್ರ ಜೀತುವನ್ನು ನೆಲಕ್ಕುರುಳಿಸಿ ಶಾಲ್ ಒಂದರ ಸಹಾಯದಿಂದ ಆತನ ಕತ್ತು ಬಿಗಿದು ನಂತರ ತನ್ನ ತಪ್ಪನ್ನು ಮರೆಮಾಚಲು ದೇಹಕ್ಕೆ ಬೆಂಕಿ ಹಚ್ಚಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಆಕೆಯನ್ನು ಸಂಶಯದ ಮೇಲೆ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಮೂರು ದಿನಗಳ ಹಿಂದೆ ಜಯ ಮೋಳ್ ಪೊಲೀಸ್ ಠಾಣೆಗೆ ತೆರಳಿ ತನ್ನ ಮಗ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಳು. ಬುಧವಾರ ಜೀತುವಿನ ಅರ್ಧ ಸುಟ್ಟ ದೇಹ ಆಕೆಯ ಮನೆಯ ಹತ್ತಿರದ ರಬ್ಬರ್ ಎಸ್ಟೇಟ್ ಒಂದರಲ್ಲಿ ಪತ್ತೆಯಾಗಿತ್ತು.
ಜಯಮೋಳ್ ಕೈಯಲ್ಲಿ ಸುಟ್ಟ ಗಾಯವಿರುವುದನ್ನು ವಿಚಾರಣೆಯ ವೇಳೆ ಗಮನಿಸಿದ ಪೊಲೀಸರು ಈ ಬಗ್ಗೆ ಪ್ರಶ್ನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ತನ್ನ ಪತ್ನಿ ಮಾನಸಿಕ ಸಮಸ್ಯೆಯೆದುರಿಸುತ್ತಿದ್ದಾಳೆಂದು ಜಯಮೋಳ್ ಪತಿ ಜೊಬ್ ವಿ. ಜಾನ್ ಪೊಲೀಸರಿಗೆ ತಿಳಿಸಿದ್ದಾನಲ್ಲದೆ, ಮಗ ಅಪಹಾಸ್ಯಗೈದಾಗ ಸಹಿಸದೆ ಆಕೆ ಈ ಕೃತ್ಯ ಎಸಗಿದ್ದಾಳೆಂದು ಆತ ಹೇಳಿಕೊಂಡಿದ್ದಾನೆ.
ತನಿಖೆಗಾಗಿ ಜಯಮೋಳ್ ಳನ್ನು ಪೊಲೀಸರು ಆಕೆಯ ಮನೆಗೆ ಕರೆತಂದಾಗ ಸ್ಥಳೀಯರು ಆಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.