ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ನ್ಯಾಯ ಸಿಗಲಿದೆ: ಅರ್ಜುನಹಳ್ಳಿ ಪ್ರಸನ್ನಕುಮಾರ್
ಕಾವೇರಿ ಹಾಗೂ ಮಹಾದಾಯಿ ನೀರು ಹಂಚಿಕೆ ವಿವಾದ
ಬೆಂಗಳೂರು, ಜ.19: ಕಾವೇರಿ ಹಾಗೂ ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಮ್ಮ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಇಚ್ಛಾಶಕ್ತಿಯಿಂದ ಹೋರಾಟ ಮಾಡಿದರೆ ಮಾತ್ರ ರಾಜ್ಯಕ್ಕೆ ದಕ್ಕಬಹುದಾದ ಪಾಲನ್ನು ಪಡೆಯಬಹುದು ಎಂದು ನೀರಾವರಿ ಚಿಂತಕ ಅರ್ಜುನಹಳ್ಳಿ ಪ್ರಸನ್ನಕುಮಾರ್ ತಿಳಿಸಿದರು.
ಶುಕ್ರವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ, ಮೇಕೆದಾಟು ಜಲಾಶಯ ನಿರ್ಮಾಣ ಹೋರಾಟ ಸಮಿತಿ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ನೀರು-ನಮ್ಮ ಹಕ್ಕು’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೆ ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಮೋಸವಾಗಿದೆ. ನಮ್ಮ ಜನಪ್ರತಿನಿಧಿಗಳ ಅವಕಾಶಸಿಂಧು ಧೋರಣೆಯಿಂದಾಗಿಯೆ ನಮ್ಮ ನೀರನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ದೂರುತ್ತಾ ಕುಳಿತುಕೊಳ್ಳುವ ಅಗತ್ಯವಿಲ್ಲ. ಇಡೀ ರಾಜ್ಯದ ಜನತೆ ಕಾವೇರಿ ವಿವಾದವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಒಕ್ಕೊರಲಿನಿಂದ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಬೇಕು. ಆ ಮೂಲಕ ನ್ಯಾಯಯುತವಾಗಿ ನಮಗೆ ಸಿಗಬೇಕಾದ ನೀರನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಚಾಮರಾಜನಗರ ಭಾಗದಲ್ಲಿ ಮೋಯಾರ್ ಹಾಗೂ ಭವಾನಿ ನದಿ ಹರಿಯುತ್ತಿದೆ. ಆದರೆ, ನಮ್ಮ ಜನಪ್ರತಿನಿಧಿಗಳಿಗೆ ಮೋಯಾರ್ ನದಿ ಇದೆಯೆಂಬ ಕಲ್ಪನೆಯೆ ಇಲ್ಲ. ಹೀಗಾಗಿ ಮೋಯಾರ್ ನದಿಯ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಜನಪ್ರತಿನಿಧಿಗಳು ಮೊದಲು ರಾಜ್ಯದಲ್ಲಿ ಎಷ್ಟೆಲ್ಲ ನದಿಗಳಿವೆ, ಎಷ್ಟು ಕಿಲೋಮೀಟರ್ ಹರಿಯುತ್ತದೆ ಎಂಬುದರ ಮಾಹಿತಿ ಪಡೆಯಲಿ ಎಂದು ಅವರು ಹೇಳಿದರು.
ಪವರ್ ಟೆಕ್ನಾಲಜಿ ಲಿಮಿಟೆಡ್ ಕ್ಯಾಪ್ಟನ್ ರಾಜಾರಾವ್ ಮಾತನಾಡಿ, ಬೆಂಗಳೂರು ಜನತೆ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕೇವಲ ಕಾವೇರಿ ನೀರನ್ನೆ ನಂಬಿಕೊಳ್ಳದೆ, ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುವತ್ತ ಚಿಂತಿಸಬೇಕಾಗಿದೆ. ಮೊದಲು ಬೆಂಗಳೂರಿನ ನಿವಾಸಿಗಳು ತಮ್ಮ ಮನೆಗಳ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿಕೊಳ್ಳಲು ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಎ.ಜೆ.ಸದಾಶಿವ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಮತ್ತಿತರರಿದ್ದರು.







