ಗೋರಕ್ಷಕರಿಂದ ದಾಳಿ ಪ್ರಕರಣಗಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗಮನಕ್ಕೆ

ಜೈಪುರ,ಜ.19: ಗೋರಕ್ಷಕ ಗುಂಪುಗಳ ದಾಳಿಗಳಿಂದ ಸಾವುಗಳು ಸಂಭವಿಸಿರುವ ಕೆಲವು ಪ್ರಕರಣಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ ಗಮನಕ್ಕೆ ತೆಗೆದುಕೊಂಡಿದೆ ಮತ್ತು ರಾಜ್ಯ ಸರಕಾರದ ವರದಿ ಸ್ವೀಕರಿಸಿದ ಬಳಿಕ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಆಯೋಗದ ಅಧ್ಯಕ್ಷ ನ್ಯಾ(ನಿ). ಎಚ್.ಎಲ್.ದತ್ತು ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ ಸರಕಾರವು ದಲಿತರು ಸೇರಿದಂತೆ ತನ್ನ ಪ್ರಜೆಗಳ ಕಾಳಜಿಯನ್ನು ವಹಿಸಿದೆ ಎನ್ನುವುದು ಆಯೋಗದ ಅಭಿಪ್ರಾಯವಾಗಿದೆ. ಯಾವುದೇ ವ್ಯವಸ್ಥೆಯಲ್ಲಿ ಕೆಲವು ಲೋಪಗಳಿರುತ್ತವೆ, ಆದರೆ ಅವನ್ನು ಸಾರ್ವತ್ರಿಕಗೊಳಿಸಬಾರದು. ರಾಜಸ್ಥಾನವು ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸಿದೆ ಮತ್ತು ಅದರಿಂದ ಜನರಿಗೆ ಲಾಭವಾಗಿದೆ ಎಂದರು.
ಜಿಲ್ಲಾಮಟ್ಟದಲ್ಲಿ ಮಾನವ ಹಕ್ಕುಗಳ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಅವರು, ಕೆಲವು ರಾಜ್ಯಗಳು ಈಗಾಗಲೇ ಇಂತಹ ನ್ಯಾಯಾಲಯಗಳನ್ನು ಸ್ಥಾಪಿಸಿವೆ ಮತ್ತು ಆಯಾ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸಹಮತಿಯೊಂದಿಗೆ ಈ ನ್ಯಾಯಾಲಯಗಳನ್ನು ಶೀಘ್ರ ಸ್ಥಾಪಿಸುವಂತೆ ಇತರ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಆಯೋಗವು ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ವಿಚಾರಣೆಗಾಗಿ ಇಲ್ಲಿ ಎರಡು ದಿನಗಳ ಶಿಬಿರವನ್ನು ಹಮ್ಮಿಕೊಂಡಿತ್ತು.