ಅರ್ಹ ಮತದಾರರಿಗೆ ಅವಕಾಶ ತಪ್ಪಬಾರದು: ಪಿ.ಎ.ಮೇಘಣ್ಣವರ್
ಧಾರವಾಡ, ಜ.19: ಚುನಾವಣಾಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳುವಾಗ ಹೆಚ್ಚು ಜಾಗರೂಕತೆ ವಹಿಸುವುದು ಮುಖ್ಯ. ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ವೇಳೆ ಯಾವುದೇ ಅರ್ಹ ಮತದಾರರು ಅವಕಾಶ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಸಮರ್ಪಕವಾಗಿ ಪರಿಷ್ಕರಣೆ ನಡೆಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹಲವಾರು ಕಡೆಗಳಲ್ಲಿ ಜನರು ಉದ್ಯೋಗ ಮತ್ತಿತರ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಬೇರೆಡೆ ಹೋಗಿರುತ್ತಾರೆ. ಸುತ್ತಮುತ್ತಲಿನ ನಾಗರಿಕರಿಂದ ಅವರ ವಾಸಸ್ಥಳದ ಬಗೆಗೆ ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಲಂಬಾಣಿ ತಾಂಡಾಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಷ್ಕರಣೆ ಕಾರ್ಯ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಕ್ಷೇತ್ರದ ಜನಸಂಖ್ಯೆ ಮತ್ತು ಮತದಾರರ ಸಂಖ್ಯೆಯ ಅನುಪಾತ ಸರಿಯಾಗಿರುವಂತೆ ಕ್ರಮವಹಿಸಬೇಕು. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಬಗ್ಗೆ ಸಮೀಕ್ಷೆ ನಡೆಸಿ ನಿಖರ ಕಾರಣ ವಿಶ್ಲೇಷಣೆ ಮಾಡಬೇಕು. 4-5 ವರ್ಷಗಳ ಹಿಂದೆ ಹಾಸ್ಟೆಲು, ಪಿಜಿಗಳಲ್ಲಿ ನೆಲೆಸಿದ್ದ ಮಹಿಳೆಯರು ಈಗ ಬೇರೆಡೆ ಸ್ಥಳಾಂತರವಾಗಿರುತ್ತಾರೆ, ಅವರ ಹೆಸರುಗಳನ್ನು ಗುರುತಿಸಿ ಪಟ್ಟಿಯಿಂದ ಕೈಬಿಡಬೇಕು ಎಂದು ಅವರು ಹೇಳಿದರು.
ಮದುವೆಯಾಗಿ ಗಂಡನ ಮನೆಗೆ ತೆರಳಿದ ಮಹಿಳೆಯರ ಹೆಸರುಗಳು ಎರಡೂ ಕಡೆಗಳಲ್ಲಿ ನಮೂದಾಗಿರುತ್ತವೆ. ಅವುಗಳನ್ನು ಖಚಿತಪಡಿಸಿಕೊಂಡು ತೆಗೆದುಹಾಕಬೇಕು. ಜ.22ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಮೇಘಣ್ಣವರ್ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವಿವರಗಳನ್ನು ಒದಗಿಸಿ, ಕರ್ತವ್ಯ ಲೋಪ ಎಸಗಿದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ರಾಯಮಾನೆ, ಉಪಭಾಗಾಧಿಕಾರಿ ಮಹೇಶ ಕರ್ಜಗಿ, ಚುನಾವಣಾ ತಹಸೀಲ್ದಾರ್ ಬಿ.ವಿ.ಲಕ್ಷ್ಮೇಶ್ವರ್ ಸೇರಿದಂತೆ ಜಿಲ್ಲೆಯ ಎಲ್ಲ ತಹಸೀಲ್ದಾರರು, ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







