ಸಂಶೋಧನೆಯ ಫಲ ರೈತರಿಗೆ ತಲುಪಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜ.19: ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳು ನೇರವಾಗಿ ರೈತರನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆಗಳು ಸಾರ್ಥಕತೆ ಪಡೆಯುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಅರಮನೆ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಮೂರು ದಿನ ಆಯೋಜಿಸಿರುವ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದು, ವೈವಿಧ್ಯಮಯ ಹವಾಮಾನವಿದೆ. ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತೇವೆ. ರೈತರಲ್ಲಿ ಸಾವಯವ, ಸಿರಿಧಾನ್ಯಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿ, ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳು ರೈತರನ್ನು ತಲುಪಬೇಕು ಎಂದು ಹೇಳಿದರು.
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸೇರಿದಂತೆ ಆಹಾರೋತ್ಪನ್ನಗಳನ್ನು ಹೊರ ದೇಶಗಳಿಗೆ ರಫ್ತು ಮಾಡುವ ಭರದಲ್ಲಿ ರೈತರು ಸಾವಯವ ಕೃಷಿ ಪದ್ಧತಿ ಬಿಟ್ಟು ರಾಸಾಯನಿಕ ಕೃಷಿಗೆ ಒಗ್ಗಿಕೊಂಡಿದ್ದಾರೆ. ಹೀಗಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ, ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಆರೋಗ್ಯಯುತ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಬೇಕೆಂದು ಕರೆ ನೀಡಿದರು.
ಕೃಷಿಯ ವಾಸ್ತವಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ಅಭಿವೃದ್ಧಿಪಡಿಸುವುದು, ಯುವಕರ ವಲಸೆ ತಪ್ಪಿಸುವುದು, ಕೃಷಿ ಅವಲಂಬನೆಯನ್ನು ಹೆಚ್ಚಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಸನ್ನಿವೇಶ ಈಗ ನಿರ್ಮಾಣವಾಗಿದೆ ಎಂದ ಅವರು, ನಮ್ಮ ರಾಜ್ಯ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ಕಳೆದ ಹದಿನಾರು ವರ್ಷದಲ್ಲಿ ಹದಿಮೂರು ವರ್ಷ ಬರಗಾಲ ಇತ್ತು. ಕಳೆದ ಮೂರು ವರ್ಷವಂತೂ ಭೀಕರ ಬರಗಾಲವನ್ನು ನಾವು ಎದುರಿಸಿದ್ದೇವೆ. ಇದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ದೇಶದಲ್ಲೇ ಮೊದಲ ಬಾರಿಗೆ 2004ರಲ್ಲಿ ಸಾವಯವ ಕೃಷಿ ನೀತಿ ಘೋಷಣೆ ಮಾಡಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ ರಾಜ್ಯ ನಮ್ಮದು. 2017ರಲ್ಲಿ ಪರಿಷ್ಕೃತ ನೀತಿ ಜಾರಿಗೊಳಿಸಿದ್ದೇವೆ. ರೈತರ ಆದಾಯ, ಉತ್ಪಾದನೆ ಹೆಚ್ಚಿಸಿ, ದುಷ್ಪರಿಣಾಮಗಳ ತಗ್ಗಿಸಲು ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಹೊಸ ಚಿಂತನೆ, ಆವಿಷ್ಕಾರ, ಪ್ರಯೋಗಗಳು ಆರಂಭವಾಗಿವೆ ಎಂದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸಾವಯವ ಕೃಷಿ ಪದ್ಧತಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ಎರಡೂವರೆ ಸಾವಿರ ಹೆಕ್ಟೇರ್‌ನಲ್ಲಿದ್ದ ಸಾವಯವ ಕೃಷಿ ಈಗ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ರೈತರಲ್ಲಿಯೂ ಸಾವಯವ ಕೃಷಿ ಕುರಿತು ಹೆಚ್ಚಿನ ಆಸಕ್ತಿ ಬರಬೇಕು ಎಂದರು.
ರೈತರು ಸುಸ್ಥಿರವಾದ ವ್ಯವಸಾಯ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ದೇಶದಲ್ಲಿ ಸಾವಯವ ಕೃಷಿ ವೇಗವಾಗಿ ಬೆಳೆಯುತ್ತಿದೆ. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ರಾಜ್ಯ ಮೂರನೆ ಸ್ಥಾನದಲ್ಲಿದೆ. ಸಾವಯವ ಕೃಷಿ ಬೆಳವಣಿಗೆ ಪ್ರಮಾಣ ನಮ್ಮ ರಾಜ್ಯದಲ್ಲಿ ಶೇ. 30ರಿಂದ ಶೇ. 40ರಷ್ಟಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ವಿವಿಧ ದೇಶಗಳ ಕಂಪೆನಿಗಳ ಮುಖ್ಯಸ್ಥರು ಸೇರಿದಂತೆ ಪ್ರಮುಖರಿದ್ದರು.
‘ನಾನೂ ಬಳಸುವೆ’
ಆರೋಗ್ಯದ ಬಗ್ಗೆ ಜನರಿಗೆ ಹೆಚ್ಚು ಕಾಳಜಿ ಬಂದಿದೆ. ಹೀಗಾಗಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮ ಮನೆಯಲ್ಲೂ ಸಿರಿಧಾನ್ಯ ಬಳಸುತ್ತೇವೆ. ಬೆಳಗ್ಗೆ ಮನೆಯಲ್ಲಿ ನವಣೆ ರೊಟ್ಟಿ ತಿಂದು ಸಮಾರಂಭಕ್ಕೆ ಬಂದಿದ್ದೇನೆ. ಅಲ್ಲದೆ ಖಾನಾವಳಿಯಲ್ಲಿ ನಾನು ಹಾಗೂ ಕೇಂದ್ರ ಸಚಿವ ಸದಾನಂದಗೌಡರು ಈರುಳ್ಳಿ, ಮಸಾಲೆ ದೋಸೆಯ ರುಚಿ ನೋಡಿದೆವು. ಆ ದೋಸೆ ವಿದ್ಯಾರ್ಥಿ ಭವನದ ದೋಸೆಗಿಂತ ಕಡಿಮೆ ಏನಿರಲಿಲ್ಲ.
-ಸಿದ್ಧರಾಮಯ್ಯ, ಮುಖ್ಯಮಂತ್ರಿ.







