‘ಪದ್ಮಾವತ್’ಗೆ ಸೆನ್ಸಾರ್ ನೀಡಿದ ಪ್ರಮಾಣ ಪತ್ರ ರದ್ದತಿಗೆ ಕೋರಿದ ಮನವಿ ತಿರಸ್ಕೃತ

ಹೊಸದಿಲ್ಲಿ, ಜ. 19: ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ಪದ್ಮಾವತ್’ಗೆ ಸೆನ್ಸಾರ್ ಮಂಡಳಿ ನೀಡಿದ ಪ್ರಮಾಣಪತ್ರವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ದಾವೆಯ ತುರ್ತು ವಿಚಾರಣೆಯ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
‘ಪದ್ಮಾವತ್’ ಚಿತ್ರದ ಪ್ರದರ್ಶನದಿಂದ ಜೀವ, ಸೊತ್ತು, ಕಾನೂನು ಹಾಗೂ ಸುವ್ಯವಸ್ಥೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂಬ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಹಾಗೂ ಚಂದ್ರಚೂಡ ಅವರನ್ನೊಳಗೊಂಡ ಪೀಠ ಹೇಳಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸವಲ್ಲ. ಅದು ರಾಜ್ಯದ ಕೆಲಸ. ಮನವಿ ತಿರಸ್ಕರಿಸಲಾಗಿದೆ ಎಂದು ನ್ಯಾಯವಾದಿ ಎಂ.ಎಲ್. ಶರ್ಮಾ ಸಲ್ಲಿಸಿದ ನೂತನ ಮನವಿಯ ತುರ್ತು ವಿಚಾರಣೆ ನಿರಾಕರಿಸಿ ಪೀಠ ಹೇಳಿದೆ.
ದೀಪಿಕಾ ಪಡುಕೋಣೆ ನಟಿಸಿರುವ ಪದ್ಮಾವತ್ ಚಲನಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ನೀಡಿದ ಯು/ಎ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ಕೋರಿ ಎಂ.ಎಲ್. ಶರ್ಮಾ ಮನವಿ ಸಲ್ಲಿಸಿದ್ದರು.