ಐಎಸ್‌ಎಸ್ ಕೇಡರ್ ರಚನೆಗೆ ಕೇಂದ್ರದ ಚಿಂತನೆ: ಅನಂತ ಕುಮಾರ್ ಹೆಗಡೆ

ಬೆಂಗಳೂರು, ಜ.19: ಐಎಎಸ್, ಐಪಿಎಸ್, ಐಎಫ್‌ಎಸ್ ಮಾದರಿಯಲ್ಲಿ ಹೊಸದಾಗಿ ಐಎಸ್‌ಎಸ್ ಹೆಸರಿನ ಹೊಸ ಅಧಿಕಾರಿ ವರ್ಗ ಹಾಗೂ ಕೇಡರ್ ರಚಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.
ಶುಕ್ರವಾರ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಎಚ್‌ಎಎಲ್‌ನ ಡಾ.ವಿ.ಎಂ.ಘಾಟ್ಗೆ ಸಭಾಂಗಣದಲ್ಲಿ ‘ಬಾಹ್ಯಾಕಾಶ ಹಾಗೂ ವಿಮಾನಯಾನ ಕ್ಷೇತ್ರ’ದಲ್ಲಿನ ಸವಾಲುಗಳ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಎಸ್‌ಎಸ್ ಜತೆಗೆ ದೇಶದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಪ್ರತಿ ರಾಜ್ಯದಲ್ಲೂ ಐಐಎಂ ಮಾದರಿಯಲ್ಲಿ ಐಐಎಸ್(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್) ಸಂಸ್ಥೆಗಳನ್ನು ಆರಂಭಿಸಲಾಗುವುದು ಎಂದು ಅನಂತಕುಮಾರ್ ಹೆಗಡೆ ಹೇಳಿದರು. ಬಾಹ್ಯಾಕಾಶ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ವೈಮಾನಿಕ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಕೇಂದ್ರ ಸರಕಾರವು 15 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಆರು ಕೌಶಲ್ಯ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಹಿಂದಿಗೆ ಮಾನ್ಯತೆ: ಸಾಗರದಾಚೆಯ ಭಾಷೆ ಮೇಲೆ ನನಗೆ ವಿಶ್ವಾಸವಿಲ್ಲ. ನಾನು ಭಾರತೀಯನಾಗಿದ್ದೇನೆ. ಹಾಗಾಗಿ, ನಾನು ರಾಷ್ಟ್ರಭಾಷೆ ಹಿಂದಿಯಲ್ಲಿ ಮಾತನಾಡುತ್ತೇನೆಂದು ಅನಂತಕುಮಾರ್ ಹೆಗಡೆ ಹೇಳಿದರು.
ನಗರದ ಐಟಿಪಿಎಲ್ ರಸ್ತೆಯಲ್ಲಿರುವ ದೇವಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬಾಹ್ಯಾಕಾಶ ವಿನ್ಯಾಸ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅನಂತಕುಮಾರ್, ವಿಶ್ವಕ್ಕೆ ಜ್ಞಾನದ ಭಂಡಾರ ಭಾರತ, ವಿಶ್ವಕ್ಕೆ ಜ್ಞಾನವನ್ನು ಹರಡಿದ್ದೇ ನಮ್ಮ ದೇಶ. ಜಗತ್ತಿನ ಕಣ್ಣು ಈಗ ನಮ್ಮ ದೇಶದ ಮೇಲೆ ಬಿದ್ದಿದೆ. ಇಲ್ಲಿ, ಅವಕಾಶಗಳು ಮಾತ್ರ ಅಲ್ಲ ಇಡೀ ಜ್ಞಾನದ ಭಂಡಾರವಿದೆ ಎಂದರು.
ಪ್ರತಿಭಾವಂತರೊಂದಿಗೆ ನಮ್ಮ ಸರಕಾರ ಜತೆಗಿರಲಿದೆ. ದೇಶ ಕಟ್ಟುವವರ ಬಗ್ಗೆ ನಮ್ಮ ಗಮನ ಇರುತ್ತದೆಯೋ ಹೊರತು, ಕೇವಲ ಪ್ರಮಾಣ ಪತ್ರಕ್ಕಾಗಿ ದುಡಿಯುವವರ ಬಗ್ಗೆಯಲ್ಲ ಎಂದು ಅನಂತಕುಮಾರ್ ಹೆಗಡೆ ಹೇಳಿದರು.







