ಕಟ್ಟಡ ನಿರ್ಮಾಣ ಉದ್ದಿಮೆಯಲ್ಲಿ ಪಾರದರ್ಶಕತೆ ಇರಲಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರು, ಜ. 19: ಕಟ್ಟಡ ನಿರ್ಮಾಣ ಉದ್ದಿಮೆಯಲ್ಲಿ ಪಾರದರ್ಶಕತೆ ತಂದು ಯಾವುದೇ ಅಡೆತಡೆಗಳಿಲ್ಲದೆ ಉದ್ದಿಮೆದಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹಕಾರ ನೀಡಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ ನೀಡಿದ್ದಾರೆ.
ಶುಕ್ರವಾರ ನಗರದ ಹೊರ ವಲಯದಲ್ಲಿನ ರೆಸಾರ್ಟ್‌ನಲ್ಲಿ ‘ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ಏರ್ಪಡಿಸಿದ್ದ 28ನೆ ಅಖಿಲ ಭಾರತ ಬಿಲ್ಡರ್ಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಭವಿಷ್ಯ ಕೃಷಿ ಹಾಗೂ ವ್ಯಾಪಾರದ ಮೇಲೆ ನಿಂತಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಹಣ ಹೂಡಿಕೆಯನ್ನು ಬೆಂಬಲಿಸಿ ಇದನ್ನು ಗಟ್ಟಿಗೊಳಿಸಬೇಕು. ಇದು ಭಾರತದ ದೊಡ್ಡ ಉದ್ದಿಮೆಗಳಲ್ಲಿ ಒಂದಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ. ಇದರಿಂದ ಮೂಲಸೌಕರ್ಯ ಅಭಿವೃದ್ಧಿ, ಜೆಡಿಪಿ ಬೆಳವಣಿಗೆ ಹಾಗೂ ಉದ್ಯೋಗಾವಕಾಶ ಸಿಗಲಿದೆ ಎಂದರು.
2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವ ಉದ್ದೇಶ ಕೇಂದ್ರ ಸರಕಾರದ್ದು. 2020ರ ವೇಳೆಗೆ ಭಾರತದಲ್ಲಿ ರಿಯಲ್ ಎಸ್ಟೇಟ್‌ನ ಹೂಡಿಕೆ 118 ಬಿಲಿಯನ್ ದಾಟಲಿದೆ. ಭಾರತ ವಿಶ್ವದ 3ನೆ ಆರ್ಥಿಕ ಸಧೃಢ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಬಿಲ್ಡರ್‌ಗಳು ತಮ್ಮ ಗುಣಮಟ್ಟ ಕಾಪಾಡಿಕೊಂಡು ಉದ್ದಿಮೆಗೆ ಒಳ್ಳೆಯ ಹೆಸರು ತರಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ವಾಜುಭಾಯಿ ವಾಲಾ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅವಶ್ಯಕತೆಯಿದ್ದು ಇದನ್ನು ಬಿಲ್ಡರ್‌ಗಳು ಅಳವಡಿಸಿಕೊಳ್ಳಬೇಕು. ಈ ಉದ್ದಿಮೆಗೆ ಸಂಬಂಧಿಸಿದಂತೆ ಒಂದು ಗುಣಮಟ್ಟದ ತರಬೇತಿ ಸಂಸ್ಥೆಯ ಅವಶ್ಯಕತೆ ಇದೆ. ಎಲ್ಲರೂ ಸ್ಮಾರ್ಟ್‌ಸಿಟಿ ಕಲ್ಪನೆಯನ್ನು ನಿಜವಾಗಿಸಬೇಕು ಎಂದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯಾಧ್ಯಕ್ಷ ಎಚ್.ಎನ್. ವಿಜಯರಾಘವ ರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 18 ಸಾವಿರ ಸದಸ್ಯರು ಹಾಗೂ 1 ಲಕ್ಷ ನೋಂದಾಯಿತ ಸದಸ್ಯರನ್ನು ಹೊಂದಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ, ವಸತಿ ನಮ್ಮ ಆದ್ಯತೆಯಾಗಿದೆ. 65ಲಕ್ಷ ಕೋಟಿ ವೆಚ್ಚದಲ್ಲಿ ಸೌರಶಕ್ತಿಯೋಜನೆಯನ್ನು ಜಾರಿಗೆ ತರಲಾಗಿದೆ. ವಿದೇಶಿ ಹಣ ಹೂಡಿಕೆಗೆ ಬೆಂಬಲ ನೀಡಲಾಗುವುದು ಎಂದರು.
ಸಿಮೆಂಟ್ ಬೆಲೆಯನ್ನು ಸಕ್ರಮಗೊಳಿಸುವಲ್ಲಿ ಹೆಜ್ಜೆ ಇಡಲಾಗಿದೆ. ಉದ್ದಿಮೆದಾರರಿಗೆ, ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಸಂಸ್ಥೆ ಸನ್ನದ್ಧವಾಗಿದೆ ಎಂದರು. ಸಂಸದ ಪಿ.ಸಿ.ಮೋಹರ್, ಬಿಲ್ಡರ್ಸ್ ಅಸೋಯೇಷನ್ ಆಫ್ ಇಂಡಿಯಾದ ಸಮ್ಮೇಳನ ಅಧ್ಯಕ್ಷ ಭೀಷ್ಮ ಆರ್.ರಾಧಾಕೃಷ್ಣನ್, ನಿರ್ವಹಣಾ ಸಮಿತಿ ಅಧ್ಯಕ್ಷ ಕೆ. ಸುಬ್ರಮಣಿ ಉಪಸ್ಥಿತರಿದ್ದರು.







