ಬರೋಬ್ಬರಿ 19 ಕೆಜಿ ಚಿನ್ನ ಕಳವು: ಆರೋಪ

ಬೆಂಗಳೂರು, ಜ.19: ಮುಂಬೈನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೊಬ್ಬರಿಂದ 19 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಆರೋಪ ಕೇಳಿ ಬಂದಿದೆ.
ಮುಂಬೈ ಮೂಲದ ಉದ್ಯಮಿ ಬಿಜಯ್ ಎಂಬುವರು 19 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡು ರಿಫೈನರಿ ಮಾಡಿಸುವುದಕ್ಕಾಗಿ ಬೆಂಗಳೂರಿಗೆ ತರುತ್ತಿದ್ದರು ಎನ್ನಲಾಗಿದೆ.
ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಕುರ್ಲಾ ಎಕ್ಸ್‌ಪ್ರೆಸ್‌ನಲ್ಲಿ ಬಿಜಯ್ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜಯ್ ಅವರು ಚಿನ್ನವಿದ್ದ ಬ್ಯಾಗ್‌ಗಳನ್ನು ತಲೆಕೆಳಗಿಟ್ಟುಕೊಂಡು ರೈಲಿನ ಬೋಗಿಯಲ್ಲಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಸಿನಿಮೀಯ ರೀತಿ ಚಿನ್ನವನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಗುರುವಾರ ಸಂಜೆ 4 ಗಂಟೆ ಸಂದರ್ಭದಲ್ಲಿ ಬಿಜಯ್ ಅವರು ನಿದ್ದೆಯಿಂದ ಎಚ್ಚೆತ್ತುಕೊಂಡು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಬಿಜಯ್ ಅವರು ರೈಲಿನಲ್ಲಿದ್ದ ಟಿಟಿಯವರಿಗೆ ವಿಷಯ ತಿಳಿಸಿದ್ದಾರೆ. ನಂತರ ಅದೇ ರೈಲಿನಲ್ಲಿ ಮಧ್ಯರಾತ್ರಿ ಬೆಂಗಳೂರಿಗೆ ಬಂದು ಕಂಟೋನ್ಮೆಂಟ್ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಧರ್ಮಾವರಂ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಈ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗುವುದು ಎಂದು ಕಂಟೋನ್ಮೆಂಟ್ ರೈಲ್ವೆ ಠಾಣೆ ಪೊಲೀಸರು ಹೇಳಿದ್ದಾರೆ.







