ವಿಮಾನಗಳಲ್ಲಿ ಅಂತರ್ಜಾಲ,ಮೊಬೈಲ್ ಬಳಕೆಗೆ ಟ್ರಾಯ್ ಶಿಫಾರಸು

ಹೊಸದಿಲ್ಲಿ,ಜ.19: ಭಾರತೀಯ ವಾಯುಪ್ರದೇಶದಲ್ಲಿ ಸಂಚರಿಸುವ ವಿಮಾನಗಳಲ್ಲಿ ಇನ್-ಫ್ಲೈಟ್ ಕನೆಕ್ಟಿವಿಟಿ(ಐಎಫ್‌ಸಿ)ಯಾಗಿ ಅಂತರ್ಜಾಲ ಮತ್ತು ಮೊಬೈಲ್ ಸಂಪರ್ಕ ಸೇವೆಗಳಿಗೆ ಅನುಮತಿ ನೀಡಬೇಕು ಎಂದು ಟ್ರಾಯ್ ಶುಕ್ರವಾರ ಶಿಫಾರಸು ಮಾಡಿದೆ.
ಈ ವಿಷಯದಲ್ಲಿ ತಾನು ಸ್ವೀಕರಿಸಿದ ಸಲಹೆಗಳು ಮತ್ತು ಮುಕ್ತ ಚರ್ಚೆಗಳನ್ನು ವಿಶ್ಲೇಷಿಸಿದ ಬಳಿಕ ಈ ಶಿಫಾರಸನ್ನು ಮಾಡುತ್ತಿರುವುದಾಗಿ ಅದು ತಿಳಿಸಿದೆ.
3000 ಮೀ.ಗಳ ಕನಿಷ್ಠ ಎತ್ತರದ ನಿರ್ಬಂಧದೊಂದಿಗೆ ವಿಮಾನಗಳಲ್ಲಿ ಈ ಸೇವೆಗಳ ಕಾರ್ಯಾಚರಣೆಗೆ ಅನುಮತಿ ನೀಡಬೇಕು ಎಂದು ಹೇಳಿರುವ ಟ್ರಾಯ್,ಫ್ಲೈಟ್/ಏರ್‌ಪ್ಲೇನ್ ಮೋಡ್‌ನಲ್ಲಿ ಮಾತ್ರ ವಿದ್ಯುನ್ಮಾನ ಸಾಧನಗಳ ಬಳಕೆಗೆ ಅನುಮತಿ ನೀಡಿದಾಗ ವಿಮಾನದಲ್ಲಿಯ ವೈಫೈ ಸೌಲಭ್ಯದ ಮೂಲಕ ಅಂತರ್ಜಾಲ ಸೇವೆಯನ್ನು ಲಭ್ಯವಾಗಿಸಬೇಕು ಎಂದಿದೆ.
ಭಾರತೀಯ ವಾಯುಪ್ರದೇಶದಲ್ಲಿ ಐಎಫ್‌ಸಿ ಸೇವೆಗಳಿಗೆ ಅನುಮತಿಸಲು ‘ಐಎಫ್‌ಸಿ ಸರ್ವಿಸ್ ಪ್ರೊವೈಡರ್’ ಎಂಬ ವಿಶೇಷ ವರ್ಗವನ್ನು ಸೃಷ್ಟಿಸಬೇಕು. ಇಂತಹ ಪ್ರೊವೈಡರ್‌ಗಳು ದೂರಸಂಪರ್ಕ ಇಲಾಖೆಯಲ್ಲಿ ತಮ್ಮ ನೋಂದಣಿ ಮಾಡಿಸಿಕೊಂಡಿರಬೇಕು ಮತ್ತು ಅವು ಭಾರತ ಮೂಲದ್ದೇ ಆಗಿರುವ ಅಗತ್ಯವಿಲ್ಲ ಎಂದೂ ಟ್ರಾಯ್ ತಿಳಿಸಿದೆ.