ನೆಹರೂ ಮೈದಾನದಲ್ಲಿ ‘ಮಿನಿ ಭಾರತ’ ಸೃಷ್ಟಿಯ ಪ್ರಯತ್ನ !
ವೈವಿಧ್ಯತೆಯ ಪ್ರದರ್ಶನಕ್ಕೊಂದು ವೇದಿಕೆ ‘ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ’

ಮಂಗಳೂರು, ಜ.19: ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವು ದೇಶದ ವಿವಿಧ ರಾಜ್ಯಗಳ ವೈವಿಧ್ಯಮಯ ಕಲಾ ಸಂಸ್ಕೃತಿಗಳ ಪ್ರದರ್ಶನಕ್ಕೊಂದು ವೇದಿಕೆ. ಈ ಮೂಲಕ ಕಲಾವಿದರು ತಮ್ಮ ಸ್ಥಳೀಯ ಕಲಾವೈಭವವನ್ನು ಇತರರಿಗೆ ಪ್ರದರ್ಶಿಸುವ ಜತೆಗೆ ಇನ್ನೊಂದು ರಾಜ್ಯ, ಪ್ರದೇಶದ ಕಲಾ ವೈವಿಧ್ಯತೆಯನ್ನು ಆಸ್ವಾದಿಸಲು ಅವಕಾಶವನ್ನು ಕಲ್ಪಿಸಿದೆ.
ಇದು ನಗರದ ನೆಹರೂ ಮೈದಾನದಲ್ಲಿ ಇಂದು ಸಂಜೆ ಉದ್ಘಾಟನೆಗೊಂಡ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದ ಬಗ್ಗೆ ದೇಶದ ವಿವಿಧ ರಾಜ್ಯಗಳ ಕಲಾ ತಂಡಗಳ ಅನಿಸಿಕೆ.
ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಆಶ್ರಯದಲ್ಲಿ ನಡೆಯುತ್ತಿರುವ ಈ ಮಹೋತ್ಸವದಲ್ಲಿ ಭಾಗವಹಿಸಲು ದೇಶದ 22ಕ್ಕೂ ಅಧಿಕ ರಾಜ್ಯಗಳ ಸುಮಾರು 400ರಷ್ಟು ಕಲಾವಿದರು ಆಗಮಿಸುವ ಮೂಲಕ ಇಲ್ಲಿ ‘ಮಿನಿ ಭಾರತ’ ಸೃಷ್ಟಿಗೆ ಪ್ರಯತ್ನಿಸಲಾಗಿದೆ.
‘‘ಈ ಮಹೋತ್ಸವದ ಮೂಲಕ ನಾವು ನಮ್ಮ ನೃತ್ಯ ಪ್ರಕಾರವನ್ನು ಇನ್ನೊಂದು ರಾಜ್ಯದಲ್ಲಿ ಪ್ರದರ್ಶಿಸಲು ಅವಕಾಶ ದೊರಕಿದೆ. ಈರೀತಿ ಹೊರ ರಾಜ್ಯಗಳಿಗೆ ನಾವು ಕಾರ್ಯಕ್ರಮ ನೀಡಲು ಹೋಗುತ್ತಿರುತ್ತೇವೆ. ಆದರೆ ಈ ರೀತಿ ಹಲವಾರು ರಾಜ್ಯಗಳ ಕಲಾವಿದರ ಸಮಾಗಮಕ್ಕೆ ಅವಕಾಶ ಸಿಗುವುದು ಅಪರೂಪ. ನಮ್ಮ ಕಲಾ ಪ್ರಕಾರವನ್ನು ಇತರ ಕಲಾವಿದರಿಗೆ ಪ್ರದರ್ಶಿಸುವ ಜತೆಗೆ ನಾವು ಇತರ ರಾಜ್ಯಗಳ ಕಲಾ ಪ್ರಕಾರವನ್ನು ನೋಡಿ ಕಲಿಯಲು ಕೂಡಾ ಅವಕಾಶ ಸಿಗುತ್ತಿದೆ’’ ಎನ್ನುತ್ತಾರೆ ಉತ್ತರ ಕಾಂಡದ ಕಲಾವಿದ ಬೃಜ್ ಪನ್ವಾರ್. ಈ ತಂಡ ಇಂದು ವೇದಿಕೆಯಲ್ಲಿ ಚಾಪೆಲಿ ನೃತ್ಯ ಪ್ರಕಾರವನ್ನು ಪ್ರದರ್ಶಿಸಿತು.
ಉತ್ತರ ಕಾಂಡದಿಂದ ತಲಾ 15 ಮಂದಿಯ ಮೂರು ತಂಡಗಳು ಎರಡು ದಿನಗಳ ಪ್ರದರ್ಶನಕ್ಕೆ ಮಂಗಳೂರಿಗೆ ಆಗಮಿಸಿವೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಈ ಮೂರು ತಂಡಗಳು ಚೋಲಿಯಾ, ಚಾಪೆಲಿ, ತಾಡ್ಯ ಚೌಪ್ಲಾ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿವೆ ಎಂದು ಬೃಜ್ ಪನ್ವಾರ್ ತಿಳಿಸಿದರು.
ಕಲಾ ಪ್ರಕಾರಗಳ ವಿನಿಮಯಕ್ಕೊಂದು ಅವಕಾಶ
ಈ ಕಾರ್ಯಕ್ರಮ ನಮಗೆ ಹೊರ ರಾಜ್ಯಗಳ ಕಲಾ ಪ್ರಕಾರಗಳನ್ನು ವೀಕ್ಷಿಸುವ ಜತೆಗೆ ಆ ಶೈಲಿಗಳನ್ನು ನಾವು ಕಲಿತುಕೊಳ್ಳುವ ಮೂಲಕ ಕಲಾ ಪ್ರಕಾರಗಳ ವಿನಿಮಯಕ್ಕೂ ಅವಕಾಶ ಮಾಡಿಕೊಟ್ಟಿದೆ. ನಾನು ಪದವಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಈ ದಾವಣಗೆರೆಯ ಎಲಿಸೋವಾ ಜಾನಪದ ಕಲಾ ತಂಡವನ್ನು ಸೇರಿದ್ದೆ. ಕಳೆದ ನಾಲ್ಕು ವರ್ಷಗಳಿಂದ ಒರಿಸ್ಸಾ, ಕೇರಳ, ತಮಿಳುನಾಡು, ತ್ರಿವೇಂಡ್ರಂ, ಬೆಂಗಳೂರು, ಹುಬ್ಬಳ್ಳಿ- ಧಾರವಾಡ ಅಹ್ಮದಾಬಾದ್, ಗುಜರಾತ್ ಮೊದಲಾದೆಡೆ ನಮ್ಮ ತಂಡ ಕಾರ್ಯಕ್ರಮಗಳನ್ನು ನೀಡಿದೆ ಎನ್ನುತ್ತಾರೆ ದಾವಣಗೆರೆಯ ಕಲಾ ತಂಡದ ಯುವತಿ ಸುಶ್ಮಿತಾ.
ಸುಶ್ಮಿತಾರೊಂದಿಗೆ ಎಲಿಸೋವಾ ಜಾಪನದ ಕಲಾತಂಡದ 15 ಮಂದಿ ಕಲಾವಿದರು ಜ.20ರಂದು ಲಂಬಾಣಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ದೇಶದ ವೈವಿಧ್ಯತೆ ಹಾಗೂ ಏಕತೆ ಸಾರುವ ಈ ಉತ್ಸವದಲ್ಲಿ ಕರ್ನಾಟಕದ ಕಲಾವಿದರು ಸೇರಿದಂತೆ, ಉತ್ತರಕಾಂಡ, ಮಧ್ಯ ಪ್ರದೇಶ, ಚತ್ತೀಸ್‌ಘಡ, ಹರಿಯಾಣ, ಪಂಜಾಬ್,ಕ ರಾಜಸ್ತಾನ, ಹಿಮಾಚಲ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಲ, ಒರಿಸ್ಸಾ, ಗೋವಾ, ಕೇರಳ, ತೆಲಂಗಾಣ ಮೊದಲಾದ ವಿವಿಧ ರಾಜ್ಯಗ ಕಲಾವಿದರು ಭಾಗವಹಿಸುತ್ತಿದ್ದಾರೆ.
ಒರಿಸ್ಸಾದ ತಾಳೆಗರಿಯ ಪಟಚಿತ್ರಗಳು
ರಾಷ್ಟ್ರೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕರಕುಶಲ ವಸ್ತು ಪ್ರದರ್ಶನದಲ್ಲಿ ಒರಿಸ್ಸಾದ ಸಾಂಪ್ರದಾಯಿಕ ತಾಳೆಗರಿಯ ಪಟ ಚಿತ್ರಗಳು ಗಮನ ಸೆಳೆಯುತ್ತಿವೆ. ತಾಳೆ ಗರಿಯಲ್ಲಿ ಕಾಟನ್ ಸೀರೆ ಹಾಗೂ ಹುಣಸೆ ಹಣ್ಣಿನ ಅಂಟನ್ನು ಬಳಸಿ ತಯಾರಿಸಲಾದ ಹಾಳೆಯಲ್ಲಿ ಸಾಂಪ್ರದಾಯಿಕ ಬಣ್ಣಗಳಲ್ಲಿ ಚಿತ್ರಕಲೆಯನ್ನು ರಚಿಸಲಾಗುತ್ತದೆ. ಈ ರಾಮಾಯಣ, ಮಹಾಭಾರತ, ಕೃಷ್ಣ ಲೀಲೆ, ಗಣೇಶನ ವೈವಿಧ್ಯಮಯ ಚಿತ್ರಕಲೆಗಳಿಂದ ಕೂಡಿದ ಪಟಚಿತ್ರಗಳನ್ನು ತಮ್ಮ ಕಲಾವಿದರು ರಚಿಸುತ್ತಾರೆ ಎನ್ನುತ್ತಾರೆ ಒಡಿಸ್ಸಾದ ಕಲಾವಿದ ವಿಭು.
ಪ್ರದರ್ಶನದಲ್ಲಿ ಸುಮಾರು 15ರಷ್ಟು ಕರಕುಶಲ ವಸ್ತುಗಳ ಮಳಿಗೆಗಳಿದ್ದು, ಇಲ್ಲಿ ಗುಜರಾತ್‌ನ ಎಂಬ್ರಾಯಿಡರಿ ವರ್ಕ್ಸ್‌ನಿಂದ ಕೂಡಿದ ಮಹಿಳೆಯರು ಉಪಯೋಗಿಸುವ ಕರಕುಶಲ ವಸ್ತುಗಳು, ಉತ್ತರಕಾಂಡದ ಬೆಡ್‌ಶೀಟ್‌ಗಳು, ಜಾರ್ಕಂಡ್‌ನ ಸೀರೆಗಳು, ಮಹಾರಾಷ್ಟ್ರದ ಬೀಡ್ ವರ್ಕ್ಸ್‌ನ ಆಭರಣಗಳು, ಗೋವಾದ ಚಿಪ್ಪುಗಳಿಂದ ಮಾಡಲಾದ ಆಲಂಕಾರಿಕ ವಸ್ತುಗಳು, ಪಂಜಾಬಿನ ಪುಲ್ಕಾರಿ ಸೂಟ್ಸ್, ಮಧ್ಯಪ್ರದೇಶದ ಮಹೇಶ್ವರಿ ಸೀರೆಗಳು, ಪಶ್ಚಿಮ ಬಂಗಾಲದ ಕಾಂತಾ ಸ್ಚಿಚ್, ಅಸ್ಸಾಂನ ಬಿದಿರಿನ ಆಲಂಕಾರಿಕ ವಸ್ತುಗಳು, ಪಂಜಾಬ್‌ನ ಪಾದರಕ್ಷೆಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕೆ ಇರಿಸಲಾಗಿದೆ.
ವಿಭಿನ್ನ ತಿನಿಸುಗಳು
ಉತ್ತರಕಾಂಡ, ಮಹಾರಾಷ್ಟ್ರ, ಬಿಹಾರ, ಅಮೃತಸರ ಹಾಗೂ ರಾಜಸ್ತಾನದ ವಿಭಿನ್ನ ತಿಂಡಿ ತಿನಿಸುಗಳ ಮಳಿಗೆಗಳೂ ಮಹೋತ್ಸವಲ್ಲಿದೆ.







