ಅವೈಜ್ಞಾನಿಕ ಮೀನುಗಾರಿಕೆ ನಿಷೇಧಿಸಿದ ಕೇಂದ್ರದ ಆದೇಶ ಜಾರಿಗೊಳಿಸಿ: ಶೋಭಾ
ಉಡುಪಿ, ಜ.19:ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಕೋಟ್ಯಾಂತರ ಮಂದಿಗೆ ಆಹಾರ ನೀಡುತ್ತಿರುವ ಮೀನುಗಾರಿಕಾ ರಂಗದ ಆತಂಕಕ್ಕೆ ಕಾರಣ ವಾಗಿರುವ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಲು ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಮೀನುಗಾರರ ಹಿತ ಕಾಪಾಡುವಂತೆ ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಹೈವೋಲ್ಟೇಜ್ ಬೆಳಕಿನಲ್ಲಿ ನಡೆಸುವ ಮೀನುಗಾರಿಕೆ, ಬುಲ್‌ಟ್ರಾಲ್ ಮೀನುಗಾರಿಕೆ ಮತ್ತಿತರ ಅವೈಜ್ಞಾನಿಕ ಮೀನುಗಾರಿಕೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆಗೆ ಮಾತ್ರವಲ್ಲದೆ, ಮೀನುಗಳ ಸಂತತಿ ವೃದ್ಧಿಗೂ ಕಡಿವಾಣ ಬೀಳುವಂತಾಗಿದೆ. ಇದನ್ನು ಮನಗಂಡ ಕೇಂದ್ರ ಸರಕಾರ ಎಲ್ಲಾ ತರಹದ ಅವೈಜ್ಞಾನಿಕ ಮತ್ತು ತಾತ್ಕಾಲಿಕ ಲಾಭಕ್ಕಾಗಿ ನಡೆಸುವ ಮೀನುಗಾರಿಕೆಯನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಅನ್ವಯಿಸುವಂತೆ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.
ಆದರೂ ಅದನ್ನು ಉಲ್ಲಂಘಿಸಿ ಅನೇಕ ರೀತಿಯ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿದೆ. ಆದುದರಿಂದ ರಾಜ್ಯ ಸರಕಾರವು, ಕೇಂದ್ರದ ಆದೇಶವನ್ನು ಕಟ್ಟುನಿಟ್ಟಾಗಿ ಜ್ಯಾರಿಗೆ ತಂದು ಮೀನುಗಾರಿಕಾ ರಂಗದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಮೀನುಗಾರರ ಹಿತ ಕಾಪಾಡಬೇಕು ಎಂದು ಶೋಭಾ ಕರಂದ್ಲಾಜೆ ರಾಜ್ಯ ಸರಕಾರವನ್ನು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.





