ಹರಿಕೃಷ್ಣ ಬಂಟ್ವಾಳ್ ಪ್ರಚಾರಪ್ರಿಯ: ಕಾಂಗ್ರೆಸ್ ವಕ್ತಾರ ಆರೋಪ
ಮಂಗಳೂರು, ಜ.19 : ಪ್ರಚಾರಕೋಸ್ಕರ ಹರಿಕೃಷ್ಣ ಬಂಟ್ವಾಳ್ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈಯ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಕೀಳು ಮಟ್ಟದ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್ ಟೀಕಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಮುಖ್ಯಮಂತ್ರಿಯ ಕಾರ್ಯಕ್ರಮದಲ್ಲಿ ಶ್ರೀನಾರಾಯಣ ಗುರುಗಳ ಚಿತ್ರ ಬಳಕೆ ಮಾಡಿರುವುದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗಳಿಗೆ ಕಾಣಲಿಲ್ಲವೆಂಬ ಹರಿಕೃಷ್ಣ ಬಂಟ್ವಾಳ್‌ರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸಜಿಪ ಮೂಡ ಗ್ರಾಮದ ಬಿಲ್ಲವ ಸಂಘವು ನಿರ್ಮಿಸಿದ ನಾರಾಯಣ ಗುರುಮಂದಿರ ಹಾಗೂ ಜ್ಞಾನಮಂದಿರದ ಉದ್ಘಾಟನೆಗೆ ಬಿಲ್ಲವ ಸಂಘದವರು ಉಸ್ತುವಾರಿ ಸಚಿವರ ಮುಖಾಂತರ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದರು. ಬಿಲ್ಲವ ಸಂಘದ ಈ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರವನ್ನು ಸಂಘದವರು ಹಾಕಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀನಾರಾಯಣ ಗುರುಗಳ ಚಿತ್ರವಲ್ಲದೆ ಬೇರೆ ಯಾರ ಚಿತ್ರ ಹಾಕಬೇಕಾಗಿತ್ತು ಎಂಬುದನ್ನು ಹರಿಕೃಷ್ಣ ಬಂಟ್ವಾಳ್ ಹೇಳಬೇಕಾಗಿದೆ ಎಂದರು.
ಇದು ರಾಜಕೀಯ ಕಾರ್ಯಕ್ರಮವಾಗಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಹರಿಕೃಷ್ಣ ಬಂಟ್ವಾಳ್ ಅವರೇ ಪ್ರಸ್ತಾವನೆ ಮಾತುಗಳನ್ನಾಡಿ ಮುಖ್ಯಮಂತ್ರಿಗಳ ಜನಪರ ಕಾರ್ಯಕ್ರಮಗಳನ್ನು ಹಾಡಿ ಹೊಗಳಿದ್ದನ್ನು ಜನರು ಮರೆತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜನಪ್ರಿಯತೆಯನ್ನು ಸಹಿಸದ ಹರಿಕೃಷ್ಣ ಬಂಟ್ವಾಳ್ ಇದೀಗ ಸಚಿವರ ವಿರುದ್ಧ ಆರೋಪ ಮಾಡುತ್ತಿರುವುದು ಪ್ರಚಾರಕ್ಕೋಸ್ಕರ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ನಝೀರ್ ಬಜಾಲ್, ನೀರಜ್‌ಪಾಲ್, ಪ್ರೇಮ್‌ನಾಥ್ ಹಾಗು ಇತರರು ಉಪಸ್ಥಿತರಿದ್ದರು.







