ಮೊಬೈಲ್ ಕಳವು ಪ್ರಕರಣ: ಆರೋಪಿ ಸೆರೆ
ಮಂಗಳೂರು, ಜ.19: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಚಾರ್ಜ್‌ಗೆ ಇಟ್ಟ ಮೊಬೈಲನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ರೈಲ್ವೆ ಕಾಲನಿ ನಿವಾಸಿ ಪಾಪಚ್ಚನ್ (53) ಬಂಧಿತ ಆರೋಪಿ. ಕೇರಳ ಮೂಲದ ಯುವತಿಯೊಬ್ಬರು ಗುರುವಾರ ಮಧ್ಯಾಹ್ನ ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಮೊಬೈಲ್ ಚಾರ್ಜ್‌ಗೆ ಇಟ್ಟು ಟಾಯ್ಲೆಟ್‌ಗೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಮೊಬೈಲ್ ಕಳವಾಗಿತ್ತು. ತಕ್ಷಣ ಯುವತಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ಪೊಲೀಸರು ಸಿಸಿಟಿವಿ ದಾಖಲೆಯನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಮೊಬೈಲ್ ಮತ್ತು ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ. ಈತ ಆಗಾಗ ರೈಲ್ವೆ ಸ್ಟೇಷನ್‌ಗೆ ಬಂದು ಹೋಗುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ರೈಲ್ವೆ ಪೊಲೀಸ್ ಮತ್ತು ರಕ್ಷಣಾ ದಳ ಸಿಬ್ಬಂದಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ





