ಬಿಜೆಪಿ ಕಾರ್ಪೊರೇಟರ್,ಇಬ್ಬರು ಸಹಚರರ ಸೆರೆ
ಸಹ ಕಾರ್ಪೊರೇಟರ್ ಕೊಲೆಗೆ ಸಂಚು

ಮುಂಬೈ,ಜ.19: ಸಹ ಕಾರ್ಪೊರೇಟರ್ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಥಾಣೆ ಜಿಲ್ಲೆಯ ಕಲ್ಯಾಣ-ಡೊಂಬಿವಲಿ ಮಹಾ ನಗರ ಪಾಲಿಕೆಯ ಬಿಜೆಪಿ ಕಾರ್ಪೊರೇಟರ್ ಮಹೇಶ ಪಾಟೀಲ್ ಮತ್ತು ಆತನ ಇಬ್ಬರು ಸಹಚರರನ್ನು ಥಾಣೆ ಹಫ್ತಾ ನಿಗ್ರಹ ಘಟಕ(ಎಇಸಿ)ವು ಶುಕ್ರವಾರ ಬಂಧಿಸಿದೆ.
ಪಾಟೀಲ್ ತನ್ನ ಸಹಚರರಾದ ಸುಜಿತ್ ನಲವಾಡೆ ಮತ್ತು ವಿಜಯ ಬಾಕಡೆ ಅವರೊಂದಿಗೆ ಕಳೆದೊಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ಶುಕ್ರವಾರ ಕಲ್ಯಾಣ ನ್ಯಾಯಾಲಯದ ಆವರಣದಲ್ಲಿ ಈ ಮೂವರೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡೊಂಬಿವಲಿ ಪ್ರದೇಶದ ಕಾರ್ಪೊರೇಟರ್‌ಗಳಾದ ಕುನಾಲ್ ಪಾಟೀಲ್(ಪಕ್ಷೇತರ) ಮತ್ತು ಮಹೇಶ ಪಾಟೀಲ್ ನಡುವೆ ಹಳೆಯ ದ್ವೇಷವಿದೆ. ಅಪರಿಚಿತ ಫೋನ್ ನಂಬರ್‌ನಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕುನಾಲ್ ಕಳೆದ ಡಿಸೆಂಬರ್‌ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.
ಕೆಲವು ವಾರಗಳ ಹಿಂದೆ ದರೋಡೆ ಆರೋಪದಲ್ಲಿ ನಾಲ್ವರನ್ನು ಭಿವಂಡಿಯ ಗಣೇಶಪುರಿ ಪೊಲೀಸರು ಬಂಧಿಸಿದ್ದರು. ಕುನಾಲ್ ಪಾಟೀಲ್ ಕೊಲೆಗೈಯಲು ತಮಗೆ 50 ಲ.ರೂ.ಗಳನ್ನು ನೀಡಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತರು ಬಾಯ್ಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ಇನ್ನಿಬ್ಬರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು.