8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ

ಜಮ್ಮು ಮತ್ತು ಕಾಶ್ಮೀರ, ಜ.20: ಕಣಿವೆ ರಾಜ್ಯದಲ್ಲಿ ನಡೆದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ರಾಜ್ಯದ ವಿಧಾನಸಭೆಯಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ಸರಕಾರವು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಶನಿವಾರದಂದು ಸದನದಲ್ಲ್ಲಿ ಧರಣಿ ನಡೆಸಿದವು.
ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಮೌನವಾಗಿರುವುದನ್ನು ಪ್ರಶ್ನಿಸಿದ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳು ಘಟನೆ ನಡೆದ ಪ್ರದೇಶದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದವು. ಅಷ್ಟು ಮಾತ್ರವಲ್ಲದೆ ಕತುವಾ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಜನವರಿ ಹತ್ತರಂದು ರತನ್ ಗ್ರಾಮದಿಂದ ಎಂಟು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯ ಹೆತ್ತವರ ಪ್ರಕಾರ ಆಕೆಯನ್ನು ಒಂದು ವಾರ ಕೊಟ್ಟಿಗೆಯೊಂದರಲ್ಲಿ ಕೂಡಿಹಾಕಲಾಗಿತ್ತು ಮತ್ತು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ನಂತರ ಆಕೆಯನ್ನು ಹತ್ಯೆ ಮಾಡಿ ಅರಣ್ಯ ಪ್ರದೇಶದಲ್ಲಿ ದೇಹವನ್ನು ಎಸೆಯಲಾಗಿತ್ತು.
ಘಟನೆಗೆ ಸಂಬಂಧಪಟ್ಟಂತೆ ಹದಿನೈದು ವರ್ಷದ ಬಾಲಕನನ್ನು ಬಂಧಿಸಲಾಗಿದ್ದು ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಹದಿನೈದು ವರ್ಷದ ಒಬ್ಬ ಬಾಲಕನಿಂದ ಏಕಾಂಗಿಯಾಗಿ ಬಾಲಕಿಯನ್ನು ಅಪಹರಣ ಮಾಡಿ ಗ್ರಾಮದ ಮಧ್ಯ ಭಾಗದಲ್ಲಿ ಒಂದು ವಾರ ಆಕೆಯನ್ನು ಸೆರೆಯಲ್ಲಿಟ್ಟು, ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಒಂದು ಕಿ.ಮೀ ದೂರದ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಲು ಸಾಧ್ಯವೇ? ಎಂದು ಕಾಂಗ್ರೆಸ್‌ನ ಉಸ್ಮಾನ್ ಮಜೀದ್ ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದು ಅಪ್ರಾಪ್ತ ಬಾಲಕನನ್ನು ಬಂಧಿಸುವ ಮೂಲಕ ಸರಕಾರವು ಈ ಪ್ರಕರಣವನ್ನು ತರಾತುರಿಯಲ್ಲಿ ಮುಚ್ಚಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಡೀ ಪ್ರಕರಣಕ್ಕೆ ಪ್ರಾದೇಶಿಕ ಬಣ್ಣ ನೀಡುವ ಮೂಲಕ ವಿರೋಧ ಪಕ್ಷವು ಈ ಪ್ರಕರಣವನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿಯ ರಾಜೀವ್ ಜಸ್ರೋತಿಯಾ ಆರೋಪಿಸಿದ ಪರಿಣಾಮವಾಗಿ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸರಕಾರವು ಈ ಪ್ರಕರಣವನ್ನು ನಾಯಾಂಗ ತನಿಖೆಗೆ ಒಪ್ಪಿಸಿದೆ. ಪೊಲೀಸರು ತಮ್ಮ ಮಗಳ ಮೃತದೇಹವು ಪತ್ತೆಯಾಗುವವರೆಗೂ ಗ್ರಾಮದಲ್ಲಿ ಯಾರೊಬ್ಬನನ್ನೂ ವಿಚಾರಿಸಿರಲಿಲ್ಲ ಮತ್ತು ತನಿಖೆಯನ್ನೂ ನಡೆಸಿರಲಿಲ್ಲ ಎಂದು ಮೃತ ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.
“ನಮಗೆ ಅಪರಾಧಿಗಳು ಯಾರೆಂದು ತಿಳಿದಿದೆ. ಆದರೆ ಅವರ ಹೆಸರು ಹೇಳಲು ಭಯವಾಗುತ್ತಿದೆ. ಅವರ ಹೆಸರು ಹೇಳಿದರೆ ನಮ್ಮನ್ನು ಗ್ರಾಮದಿಂದಲೇ ಹೊರಹಾಕಬಹುದು ಎಂಬ ಭಯವಿದೆ” ಎಂದು ಆಂಗ್ಲ ಮಾಧ್ಯಮಕ್ಕೆ ನೀಡಿದ ಹೇಳಿಕೆಯೊಂದರಲ್ಲಿ ಬಾಲಕಿಯ ಹೆತ್ತವರು ತಿಳಿಸಿದ್ದಾರೆ.