'ನೈತಿಕ ಮೌಲ್ಯ, ವಿನಯಶೀಲತೆಯ ವಿದ್ಯೆ ಅತ್ಯಗತ್ಯ'
ಶಾರದಾ ವಿದ್ಯಾಲಯದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ರುಢಾಭಾಯಿ ವಾಲಾ

ಮಂಗಳೂರು, ಜ.20: ನೈತಿಕ ಮೌಲ್ಯ ಮತ್ತು ವಿನಯಶೀಲತೆಯಿಂದ ಕೂಡಿದ ವಿದ್ಯೆ ಇಂದಿನ ಮಕ್ಕಳಿಗೆ ತುರ್ತಾಗಿ ಬೇಕಾಗಿದೆ ಎಂದು ರಾಜ್ಯಪಾಲ ವಜೂಭಾಯಿ ರುಢಾಭಾಯಿ ವಾಲಾ ಹೇಳಿದರು.
ಶನಿವಾರ ನಗರದ ಶಾರದಾ ವಿದ್ಯಾಲಯದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಶಿಕ್ಷಣವು ಸಂಸ್ಕೃತಿಗೆ ಆದ್ಯತೆ ನೀಡುತ್ತದೆ. ಹಾಗಾಗಿಯೇ ಇಂದು ಅಮೆರಿಕಾ, ಇಂಗ್ಲಂಡ್, ಆಸ್ಟ್ರೇಲಿಯಾದಲ್ಲೂ ಕೂಡ ಭಾರತದ ಶಿಕ್ಷಣ ಪದ್ಧತಿಗೆ ಒಲವು ಸಿಗುತ್ತಿದೆ. ಜೊತೆಗೆ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ಭಾರತ ದಾಪುಗಾಲು ಹಾಕುತ್ತಿದ್ದು, ಮುಂದುವರಿದ ದೇಶಗಳನ್ನು ಭಾರತ ಅಭಿವೃದ್ಧಿಯಲ್ಲಿ ಹಿಂದಿಕ್ಕುತ್ತಿದೆ ಎಂದು ರಾಜ್ಯಪಾಲ ವಜೂಭಾಯಿ ರುಢಾಭಾಯಿ ವಾಲಾ ಹೇಳಿದರು.
ಪೇಜಾವರ ಮಠದ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು. ಕೇಂದ್ರ ಸಚಿವ ಸುರೇಶ್ ಪ್ರಭು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ, ನಿಟ್ಟೆ ವಿವಿ ಕುಲಪತಿ ಡಾ. ಎನ್. ವಿನಯ ಹೆಗ್ಡೆ ಶುಭ ಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.





