ಫಲಪುಷ್ಪ ಪ್ರದರ್ಶನದಿಂದ ಲಾಲ್‌ಬಾಗ್ ಪಕ್ಷಿ ಸಂಕುಲಕ್ಕೆ ತೊಂದರೆ: ಸಿ.ಕೆ.ರವಿಚಂದ್ರ ಆರೋಪ
ಬೆಂಗಳೂರು, ಜ. 20: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ನೆಪದಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿರುವ ಪಕ್ಷಿ ಸಂಕುಲಕ್ಕೆ ತೊಂದರೆ ಮಾಡುತ್ತಿರುವುದಲ್ಲದೆ, ಪರಿಸರವನ್ನು ಹಾಳು ಮಾಡಲಾಗುತ್ತಿದೆ ಎಂದು ರಾಜ್ಯ ನಡಿಗೆದಾರರ ಒಕ್ಕೂಟದ ಅಧ್ಯಕ್ಷ ಸಿ.ಕೆ.ರವಿಚಂದ್ರ ಆರೋಪಿಸಿದ್ದಾರೆ.
ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಮಳಿಗೆಗಳನ್ನು ಸ್ಥಾಪಿಸಿದ್ದು, ಸಂಜೆ ಆರು ಗಂಟೆಯ ನಂತರವೂ ಜನಸಂದಣಿ ಹೆಚ್ಚಿರುತ್ತದೆ. ಇದು ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ, ಉದ್ಯಾನವನದಲ್ಲಿ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಹಾವಳಿಯೂ ಮಿತಿಮೀರಿದೆ ಎಂದು ಅವರು ದೂರಿದ್ದಾರೆ.
ಬೆಳಗಿನ ಮತ್ತು ಸಂಜೆ ವಾಯು ವಿಹಾರಕ್ಕೂ ತೀವ್ರ ಅಡಚಣೆಯಾಗುತ್ತಿದೆ. ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ಜನಸಾಮಾನ್ಯರಿಗೆ ಪರಿಸರದ ಬಗ್ಗೆ ಕಳಕಳಿ ಮೂಡಿಸಬೇಕು. ಆದರೆ, ಸಸ್ಯಕಾಶಿಯಲ್ಲಿ ‘ಸಂತೆ’ ವ್ಯಾಪಾರ ಸರಿಯಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





