ಸಂವಿಧಾನವೇ ದೇಶದ ಧರ್ಮಗ್ರಂಥ: ಮಂಗಳೂರಿನಲ್ಲಿ ಕೇಂದ್ರ ಸಚಿವ ರಾಮದಾಸ ಅಠಾವಳೆ

ಮಂಗಳೂರು, ಜ.20: ಸಂವಿಧಾನವೇ ಭಾರತದ ಧರ್ಮಗ್ರಂಥ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸಂವಿಧಾನ ತಿದ್ದುಪಡಿಯಂತಹ ವಿಚಾರಕ್ಕೆ ಕೇಂದ್ರ ಸರಕಾರ ಮುಂದಾಗದು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಹಾಗೂ ರಿಪಬ್ಲಿಕ್ ಪಕ್ಷದ ಮುಖಂಡ ರಾಮದಾಸ ಅಠಾವಳೆ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ ನಿಮಿತ್ತ ಶನಿವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾರೂ ಕೂಡ ಸಂವಿಧಾನದ ಪೀಠಿಕೆಯನ್ನು ಬದಲಿಸಲು ಸಾಧ್ಯವಿಲ್ಲ. ಕಾಲಘಟ್ಟಕ್ಕೆ ಸಂಬಂಧಿಸಿ ಸುಧಾರಣೆಯ ನೆಲೆಯಲ್ಲಿ ಸಂವಿಧಾನದಲ್ಲಿ ಕೆಲವೊಂದು ತಿದ್ದುಪಡಿಗಳಾಗಿವೆಯೇ ವಿನ: ಸಂವಿಧಾನವನ್ನು ಸಂಪೂರ್ಣ ಬದಲಾಯಿಸಿಲ್ಲ. ಈ ತಿದ್ದುಪಡಿಯು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯೂ ತಂದಿಲ್ಲ ಎಂದು ಸಚಿವ ರಾಮದಾಸ ಅಠಾವಳೆ ಹೇಳಿದರು.
ದೇಶದಲ್ಲಿ ಅಂತರ್ಜಾತೀಯ ವಿವಾಹಗಳು ಹೆಚ್ಚುತ್ತಿದ್ದರೂ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಆಡಳಿತದಲ್ಲಿ ಯಾವುದೇ ಸರಕಾರವಿದ್ದರೂ ದೌರ್ಜನ್ಯಗಳು ನಿಂತಿಲ್ಲ. ದೌರ್ಜನ್ಯ ನಡೆದ ಮಾತ್ರಕ್ಕೆ ಅದನ್ನು ರಾಜಕೀಯವಾಗಿ ಪರಿಗಣಿಸುವುದು ಕೂಡ ಸರಿಯಲ್ಲ. ಅದೊಂದು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಗೋರೆಗಾಂವ್, ಗುಜರಾತ್ ಮುಂತಾದೆಡೆ ನಡೆದ ಪ್ರಕರಣಗಳು ಗಂಭೀರವಾದವುಗಳು ಎಂದ ಅಠಾವಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಜೊತೆ ರಿಪಬ್ಲಿಕ್ ಪಕ್ಷ ಸದಾ ಇರಲಿದೆ. ಕರ್ನಾಟಕದಲ್ಲಿ ಮುಂದಿನ ಚುನಾವಣೆಯ ಸಂದರ್ಭವೂ ಬಿಜೆಪಿಗೆ ಬೆಂಬಲ ನೀಡಲಿದೆ ಎಂದರು.
ಭ್ರಷ್ಟಾಚಾರ ತಡೆಗಟ್ಟುವ ನೆಲೆಯಲ್ಲಿ 10 ವರ್ಷಗಳಿಗೊಮ್ಮೆ ನೋಟು ಬದಲಾವಣೆಯಾಗಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತನ್ನ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದರು. ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ನೋಟು ಬದಲಾವಣೆ, ಜಿಎಸ್‌ಟಿ ಅನುಷ್ಠಾನದಂತಹ ಮಹತ್ತರ ಕಾರ್ಯಕ್ಕೆ ಇಳಿಯಿತು. ಇದು ಒಳ್ಳೆಯ ಬೆಳವಣಿಗೆ ಎಂದು ಸಚಿವ ರಾಮದಾಸ ಅಠಾವಳೆ ಹೇಳಿದರು.







