ಕರ್ನಾಟಕದ ನೇತ್ರಾವತಿ ಸೇರಿ 18 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪುರಸ್ಕಾರ

ಹೊಸದಿಲ್ಲಿ, ಜ.20: ಸಮಯಪ್ರಜ್ಞೆ ಹಾಗೂ ಶೌರ್ಯ ಮೆರೆದ ಭಾರತದ 18 ಮಂದಿಗೆ ರಾಷ್ಟ್ರೀಯ ಶೌರ್ಯ ಪುರಸ್ಕಾರ ಘೋಷಿಸಲಾಗಿದ್ದು, ಗಣರಾಜ್ಯೋತ್ಸವ ದಿನಾಚರಣೆಯಂದು ಪ್ರಧಾನಿ ಮೋದಿಯವರಿಂದ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ಇವರಲ್ಲಿ ಮೂವರಿಗೆ ಮರಣೋತ್ತರ ಪುರಸ್ಕಾರ ಸಂದಿದೆ.
ಶೌರ್ಯ ಪ್ರಶಸ್ತಿ ಪುರಸ್ಕಾರ ಪಡೆಯಲಿರುವ 11 ಬಾಲಕರು ಹಾಗೂ 7 ಬಾಲಕಿಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಔತಣಕೂಟವನ್ನು ಆಯೋಜಿಸಿದ್ದಾರೆ. ಈ ವರ್ಷದ ಶೌರ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವವರ ವಿವರ ಹೀಗಿದೆ.
1. ನೇತ್ರಾವತಿ ಎಂ.ಚವಾಣ್: ಕರ್ನಾಟಕದ ಬಾಗಲಕೋಟೆ ಜಿಲ್ಲೆಯ 14 ವರ್ಷದ ನೇತ್ರಾವತಿ ಎಂ. ಚವಾಣ್‌ಗೆ ಮರಣೋತ್ತರ ಪುರಸ್ಕಾರ ಸಂದಿದೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರಲ್ಲಿ ಒಬ್ಬನನ್ನು ರಕ್ಷಿಸಿ, ಇನ್ನೊಬ್ಬನನ್ನು ರಕ್ಷಿಸುವ ಪ್ರಯತ್ನದಲ್ಲಿ ನೇತ್ರಾವತಿ ಸಾವನ್ನಪ್ಪಿದ್ದಳು. ಈಕೆಯ ತಂದೆ ಮಹಾಂತೇಶ್ ಚವಾಣ್ ಪುರಸ್ಕಾರ ಸ್ವೀಕರಿಸಲಿದ್ದಾರೆ.
2. ಕರಣ್‌ಬೀರ್ ಸಿಂಗ್: ಭಾರತ-ಪಾಕ್ ಗಡಿಭಾಗದಲ್ಲಿರುವ ಅಮೃತಸರದ ಗ್ರಾಮ ಗಗುವಾಲ್‌ನ ನಿವಾಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿ 17ರ ಹರೆಯದ ಕರಣ್‌ಬೀರ್ ಸಿಂಗ್ ಕಾಲುವೆಗೆ ಉರುಳಿದ್ದ ಶಾಲಾ ಬಸ್‌ನಲ್ಲಿದ್ದ 15 ವಿದ್ಯಾರ್ಥಿಗಳನ್ನು ರಕ್ಷಿಸಿದ್ದ. ಈ ಬಸ್‌ನಲ್ಲಿ ಕರಣ್‌ಬೀರ್ ಸೇರಿ ಒಟ್ಟು 37 ವಿದ್ಯಾರ್ಥಿಗಳಿದ್ದರು. ಕಾಲುವೆಗೆ ಉರುಳಿದ ಬಸ್ಸು ನೀರಲ್ಲಿ ಮುಳುಗುತ್ತಿದ್ದ ಸಂದರ್ಭ ಪ್ರಸಂಗಾವಧಾನತೆ ತೋರಿದ್ದ ಕರಣ್‌ಬೀರ್, 15 ಮಂದಿಯನ್ನು ರಕ್ಷಿಸಲು ಸಫಲನಾಗಿದ್ದ. ಈ ದುರಂತದಲ್ಲಿ 7 ವಿದ್ಯಾರ್ಥಿಗಳು ಮೃತಪಟ್ಟಿದ್ದರೆ, 13 ಮಂದಿ ಗಾಯಗೊಂಡಿದ್ದರು.
3. ಲಾಲ್‌ಛಂದಮ: ನದಿ ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸುವ ಪ್ರಯತ್ನದಲ್ಲಿ ಮೃತಪಟ್ಟಿದ್ದ 18ರ ಹರೆಯದ ಎಫ್. ಲಾಲ್‌ಛಂದಮನಿಗೆ ಮರಣೋತ್ತರ ಪುರಸ್ಕಾರ ಸಂದಿದೆ. ಪರೀಕ್ಷೆ ಬರೆದ ಬಳಿಕ ಲಾಲ್‌ಛಂದಮ ಸೇರಿದಂತೆ ಮೂವರು ಮಿತ್ರರು ತಲಾಂಗ್ ನದಿ ತೀರದಲ್ಲಿ ಅಡ್ಡಾಡುತ್ತಿದ್ದರು. ಈ ಸಂದರ್ಭ ಓರ್ವ ವಿದ್ಯಾರ್ಥಿ ಕಾಲುಜಾರಿ ನದಿಗೆ ಬಿದ್ದು ನೀರಲ್ಲಿ ಮುಳುಗತೊಡಗಿದ್ದು, ತಕ್ಷಣ ನೀರಿಗೆ ಹಾರಿದ್ದ ಲಾಲ್‌ಛಂದಮ ಸ್ನೇಹಿತನನ್ನು ರಕ್ಷಿಸಲು ಹರಸಾಹಸ ಪಟ್ಟರೂ ವಿಫಲನಾಗಿದ್ದ. ಇಬ್ಬರೂ ನೀರಲ್ಲಿ ಮುಳುಗಿದ್ದರು. ಕೊನೆಯುಸಿರಿನ ತನಕ ಸ್ನೇಹಿತನನ್ನು ರಕ್ಷಿಸಲು ಪ್ರಯತ್ನ ನಡೆಸಿರುವುದಕ್ಕೆ ಸಾಕ್ಷಿಯಾಗಿ ತನ್ನ ಸ್ನೇಹಿತನ ದೇಹವನ್ನು ಭದ್ರವಾಗಿ ಹಿಡಿದಿದ್ದ ಲಾಲ್‌ಛಂದಮನ ಶವ ಪತ್ತೆಯಾಗಿತ್ತು.
4. ಬೆತ್ಸ್‌ವಹೊನ್ ಲಿಂಗ್ಡೊ ಪೆನ್ಲಾಂಗ್: ಮೇಘಾಲಯದ ವೆಸ್ಟ್‌ಖಾಸಿ ಹಿಲ್ಸ್ ಜಿಲ್ಲೆಯ ಗ್ರಾಮವೊಂದರ ನಿವಾಸಿ 14ರ ಹರೆಯದ ಬೆತ್ಸ್‌ವಹೊನ್ ಲಿಂಗ್ಡೊ ಪೆನ್ಲಾಂಗ್ ತನ್ನ 3ರ ಹರೆಯದ ಸೋದರನನ್ನು ಬೆಂಕಿಯಿಂದ ರಕ್ಷಿಸಿದ ಸಾಹಸಕ್ಕಾಗಿ ಶೌರ್ಯ ಪುರಸ್ಕಾರ ಪಡೆದಿದ್ದಾನೆ. ಇಬ್ಬರು ಸೋದರರು ಅಡುಗೆಮನೆಯಲ್ಲಿದ್ದಾಗ ಮನೆಗೆ ಬೆಂಕಿ ತಗುಲಿದ್ದು ಕ್ಷಣಾರ್ಧದಲ್ಲಿ ಛಾವಣಿಗೆ ಹಬ್ಬಿದೆ. ಬೆಂಕಿಯ ಕೆನ್ನಾಲಗೆಯ ನಡುವಿಂದ ತನ್ನ ಕಿರಿಯ ಸೋದರನನ್ನು ಸುರಕ್ಷಿತವಾಗಿ ಮನೆಯಿಂದ ಹೊರತಂದಿದ್ದಾನೆ ಲಿಂಗ್ಡೊ ಪೆನ್ಲಾಂಗ್.
5. ಮಮತಾ ದಲಾ: ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಕಳೆದ ಎಪ್ರಿಲ್‌ನಲ್ಲಿ ಆರು ವರ್ಷದ ಮಮತಾ ದಲಾ ಹಾಗೂ 7 ವರ್ಷದ ಅಸಾಂತಿ ದಲಾ ಕೊಳವೊಂದರಲ್ಲಿ ಸ್ನಾನ ಮಾಡುತ್ತಿದ್ದಾಗ ಐದು ಅಡಿ ಉದ್ದದ ಮೊಸಳೆಯೊಂದು ಅಸಾಂತಿ ಮೇಲೆ ದಾಳಿ ಮಾಡಿದೆ. ಈ ಸಂದರ್ಭ ಸಾಹಸ ಮೆರೆದ ಮಮತಾ, ಮೊಸಳೆಯೊಂದಿಗೆ ಕಾದಾಡಿ ಅಸಾಂತಿಯನ್ನು ಮೊಸಳೆಯ ಹಿಡಿತದಿಂದ ಬಿಡಿಸುವಲ್ಲಿ ಸಫಲವಾಗಿದ್ದಾಳೆ.
6. ಸೆಬಾಸ್ಟಿಯನ್ ವಿನ್ಸೆಂಟ್: ಕೇರಳದ ಅಲೆಪ್ಪಿಯಲ್ಲಿ ಸೆಬಾಸ್ಟಿಯನ್ ವಿನ್ಸೆಂಟ್ ಹಾಗೂ ಆತನ ಸ್ನೇಹಿತ ಅಭಿಜಿತ್ ಬೈಕಿನಲ್ಲಿ ಸಾಗುತ್ತಿದ್ದಾಗ ಅಭಿಜಿತ್ ಆಯತಪ್ಪಿ ಬದಿಯಲ್ಲಿದ್ದ ರೈಲು ಹಳಿಯ ಮೇಲೆ ಬಿದ್ದಿದ್ದಾನೆ. ದೂರದಿಂದ ರೈಲು ವೇಗವಾಗಿ ಧಾವಿಸಿ ಬರುತ್ತಿದ್ದರೂ ಅಂಜದ ಸೆಬಾಸ್ಟಿಯನ್ ತನ್ನ ಸ್ನೇಹಿತನ ಪ್ರಾಣ ಉಳಿಸುವಲ್ಲಿ ಸಫಲನಾಗಿದ್ದಾನೆ.
7. ಲಕ್ಷ್ಮೀ ಯಾದವ್: 16ರ ಹರೆಯದ ಲಕ್ಷ್ಮೀ ಯಾದವ್‌ಳನ್ನು ಅಪಹರಿಸಿದ್ದ ಮೂವರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದರು. ಈ ಸಂದರ್ಭ ಧೈರ್ಯದಿಂದ ಎದುರಿಸಿದ ಲಕ್ಷ್ಮೀ, ದುಷ್ಕರ್ಮಿಗಳ ಬೈಕ್‌ನ ಕೀಯನ್ನು ಕಸಿದುಕೊಂಡು ದೂರ ಎಸೆದಿದ್ದಳು. ದುಷ್ಕರ್ಮಿಗಳ ಗಮನ ಅತ್ತ ಹರಿಯುತ್ತಿದ್ದಂತೆಯೇ ಅವರನ್ನು ದೂರ ತಳ್ಳಿ ಅಲ್ಲಿಂದ ಓಡಿ ಸಮೀಪದಲ್ಲಿದ್ದ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಳು.
8. ಸಮೃದ್ಧಿ ಸುಶಿಲ್ ಶರ್ಮ: ಗುಜರಾತ್‌ನ 17ರ ಹರೆಯದ ಸಮೃದ್ಧಿ ಮನೆಯಲ್ಲಿ ಒಂಟಿಯಾಗಿದ್ದಾಗ ಮುಖವಾಡ ಧರಿಸಿದ್ದ ವ್ಯಕ್ತಿಯೋರ್ವ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾನೆ. ಸಮೃದ್ಧಿಯ ಕುತ್ತಿಗೆಗೆ ಚೂರಿ ಹಿಡಿದ ಆ ವ್ಯಕ್ತಿಯೊಂದಿಗೆ ಸೆಣಸಾಡಿ ಆತನನ್ನು ಹೊರಗಟ್ಟಲು ಯಶಸ್ವಿಯಾಗಿದ್ದಾಳೆ. ಈ ಪ್ರಯತ್ನದಲ್ಲಿ ಆಕೆಯ ಕೈಗೆ ಗಾಯವಾಗಿದ್ದು ರಕ್ತ ನಿಲ್ಲಲು ಎರಡು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಕೆಯ ಎಡಗೈಯ ಉಂಗುರ ಬೆರಳಿಗೆ ತೀವ್ರ ಹಾನಿಯಾಗಿದ್ದು ಶೀಘ್ರ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈ ಧೀರ ಬಾಲಕಿಗೆ ಶೌರ್ಯ ಪುರಸ್ಕಾರ ಘೋಷಿಸಲಾಗಿದೆ.
9. ರೊನುಂತ್ಲುವಾಂಗ: ಮಿಝೋರಾಂನ ಈ ಬಾಲಕ ತನ್ನ ತಂದೆಯನ್ನು ಕರಡಿಯ ದಾಳಿಯಿಂದ ರಕ್ಷಿಸಿದ ಸಾಹಸಕ್ಕಾಗಿ ಶೌರ್ಯ ಪುರಸ್ಕಾರ ಪಡೆದಿದ್ದಾನೆ. ಕಾಡಿನಲ್ಲಿ ಕರಡಿ ತಂದೆಯ ಮೇಲೆ ದಾಳಿ ನಡೆಸಿದಾಗ ಕೈಯಲ್ಲಿದ್ದ ಆಯುಧದಿಂದ ಅದನ್ನು ಹಿಮ್ಮೆಟ್ಟಿಸಿ ತಂದೆಯ ಪ್ರಾಣ ರಕ್ಷಿಸಿದ್ದಾನೆ. ಆತನ ತಂದೆ ತೀವ್ರ ಗಾಯಗೊಂಡರೂ ಪ್ರಾಣ ಉಳಿದಿದೆ.
10. ಪಂಕಜ್ ಸೆಮ್‌ವಾಲ್: ಉತ್ತರಾಖಂಡದ ಘರ್‌ವಾಲ್ ಪ್ರದೇಶದ ಪಂಕಜ್ ಸೆಮ್‌ವಾಲ್‌ನ ಮನೆಗೆ ಚಿರತೆಯೊಂದು ನುಗ್ಗಿ ಆತನ ತಾಯಿಯ ಮೇಲೆ ದಾಳಿ ನಡೆಸಿದೆ. ಆದರೆ ಧೈರ್ಯ ತೋರಿದ ಪಂಕಜ್ ಚಿರತೆಯನ್ನು ಹಿಮ್ಮೆಟ್ಟಿಸಿ ತನ್ನ ತಾಯಿಯ ಪ್ರಾಣದ ಜೊತೆಗೆ, ಸೋದರ ಹಾಗೂ ಸೋದರಿಯ ಪ್ರಾಣವನ್ನೂ ಉಳಿಸಿದ್ದಾನೆ.
11. ನಾಝಿಯಾ: ಆಗ್ರಾದ ಸದರ್ ಭಟ್ಟಿ ಪ್ರದೇಶದಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆ ನಡೆಸುವವರು ಸ್ಥಳೀಯ ಅಂಗಡಿ ಮಾಲಕರನ್ನು ಪೀಡಿಸಿ ಹಣ ವಸೂಲಿ ಮಾಡುತ್ತಿದ್ದು ಪ್ರಾಣಭಯದ ಕಾರಣ ಯಾರೂ ದೂರು ನೀಡಿರಲಿಲ್ಲ. ಆದರೆ ನಾಝಿಯಾ ಬೆಟ್ಟಿಂಗ್ ದಂಧೆಕೋರರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅದನ್ನು ಪೊಲೀಸರಿಗೆ ನೀಡಿದ್ದು, ಇದರಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಶೌರ್ಯ ಪುರಸ್ಕಾರ ಪಡೆದ ಇತರರಲ್ಲಿ 13ರ ಹರೆಯದ ಮಾನ್ಷಾ ಎನ್, 18ರ ಹರೆಯದ ಎನ್. ಶಾಂಗ್‌ಪಾನ್ ಕೊನ್ಯಾಕ್, ನಾಗಾಲ್ಯಾಂಡ್‌ನ 18ರ ಹರೆಯದ ಯೋಕ್‌ನೆಯ್ ಮತ್ತು 18ರ ಹರೆಯದ ಚಿಂಗೈ ವಾಂಗ್ಸ, ಮಹಾರಾಷ್ಟ್ರದ 17ರ ಹರೆಯದ ಅಬ್ದುಲ್ ರವೂಫ್, ಮಣಿಪುರದ 15ರ ಹರೆಯದ ಲೋಕ್ರಾಪಮ್ ರಾಜೇಶ್ವರಿ ಚಾನು, ಒಡಿಶಾದ 15ರ ಹರೆಯದ ಪಂಕಜ್ ಕುಮಾರ್ ಮಹಾಂತ ಸೇರಿದ್ದಾರೆ.
1957ರಲ್ಲಿ ಪ್ರಪ್ರಥಮ ಬಾರಿಗೆ ಶೌರ್ಯ ಪುರಸ್ಕಾರ ಪ್ರಕಟಿಸಲಾಗಿದ್ದು ಇದುವರೆಗೆ 680 ಬಾಲಕರಿಗೆ ಹಾಗೂ 283 ಬಾಲಕಿಯರಿಗೆ ಸಂದಿದೆ. ಪದಕ, ಪ್ರಮಾಣಪತ್ರ ಹಾಗೂ ನಗದು ಬಹುಮಾನದ ಜೊತೆಗೆ, ಪುರಸ್ಕಾರ ವಿಜೇತರ ಶಾಲಾ ಶಿಕ್ಷಣಕ್ಕೆ ಆರ್ಥಿಕ ನೆರವು ಕೂಡಾ ನೀಡಲಾಗುತ್ತದೆ.