ಮಂಗ ಮಾನವನಾಗಿದ್ದನ್ನು ಯಾರೂ ನೋಡಿಲ್ಲ, ಡಾರ್ವಿನ್‌ನ ಸಿದ್ಧಾಂತ ತಪ್ಪು
ಕೇಂದ್ರ ಸಚಿವ ಸತ್ಯಪಾಲ ಸಿಂಗ್

ಔರಂಗಾಬಾದ್(ಮಹಾರಾಷ್ಟ್ರ),ಜ.20: ಮಂಗನಿಂದ ಮಾನವನಾಗಿದ್ದಾನೆ ಎಂಬ ಚಾರ್ಲ್ಸ್ ಡಾರ್ವಿನ್‌ನ ಸಿದ್ಧಾಂತವು ವೈಜ್ಞಾನಿಕವಾಗಿ ತಪ್ಪಾಗಿದೆ ಮತ್ತು ಶಾಲಾಕಾಲೇಜುಗಳ ಪಠ್ಯಕ್ರಮಗಳಲ್ಲಿ ಇದನ್ನು ಬದಲಿಸಬೇಕಾದ ಅಗತ್ಯವಿದೆ ಎಂದು ಕೇಂದ್ರದ ಸಹಾಯಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಸತ್ಯಪಾಲ ಸಿಂಗ್ ಅವರು ಪ್ರತಿಪಾದಿಸಿದ್ದಾರೆ.
ಅಖಿಲ ಭಾರತ ವೈದಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ‘ಮಂಗವೊಂದು ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ತಾವು ನೋಡಿರುವುದಾಗಿ ನಮ್ಮ ಪೂರ್ವಜರು ಎಲ್ಲಿಯೂ ಉಲ್ಲೇಖಿಸಿಲ್ಲ. ಮಾನವ ಈ ಭೂಮಿಯ ಮೇಲೆ ಕಂಡು ಬಂದಾಗಿನಿಂದ ಯಾವಾಗಲೂ ಮಾನವನಾಗಿಯೇ ಇದ್ದಾನೆ ’ಎಂದರು.
‘ನಮ್ಮ ಪೂರ್ವಜರು ಸೇರಿದಂತೆ ಯಾರೊಬ್ಬರೂ ಮಂಗವೊಂದು ಮಾನವನಾಗಿದ್ದನ್ನು ನೋಡಿರುವುದಾಗಿ ಬರೆದಿಟ್ಟಿಲ್ಲ, ಮೌಖಿಕವಾಗಿಯೂ ಹೇಳಿಲ್ಲ. ನಾವು ಓದಿದ ಯಾವುದೇ ಪುಸ್ತಕಗಳಲ್ಲಿ ಅಥವಾ ನಮ್ಮ ಅಜ್ಜ-ಅಜ್ಜಿ ಹೇಳಿದ್ದ ಕಥೆಗಳಲ್ಲಿ ಇಂತಹ ಉಲ್ಲೇಖವಿಲ್ಲ ಎಂದೂ ಸಚಿವರು ಹೇಳಿದರು.