ಚಾಮರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ: ಕೆ.ಹರೀಶ್‍ಗೌಡ

ಮೈಸೂರು,ಜ.20: ಮೈಸೂರು ನಗರದ ವಿಧಾಸಭಾ ಕ್ಷೇತ್ರಗಳಲ್ಲಿ ಒಂದಾದ ಚಾಮರಾಜ ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನೂರಕ್ಕೆ ನೂರು ಸತ್ಯ ಎಂದು ಜೆಡಿಎಸ್ ಪಕ್ಷದ ಮಾಜಿ ನಗರಾಧ್ಯಕ್ಷ ಕೆ.ಹರೀಶ್‍ಗೌಡ ಸ್ಪಷ್ಟ ಪಡಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ವಿಧಾಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಥವಾ ಬೇರೆ ಯಾವುದೇ ಪಕ್ಷದವರು ನನಗೆ ಟಿಕೆಟ್ ಕೊಡುತ್ತೇನೆ ಎಂದು ಭರವಸೆ ನೀಡಿದರೆ ನಮ್ಮ ಚಾಮರಾಜ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಸ್ಪರ್ಧೆ ಮಾಡುತ್ತೇನೆ. ಒಂದು ವೇಳೆ ನನಗೆ ಯಾವ ಪಕ್ಷದವರೂ ಟಿಕೆಟ್ ನೀಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದು ಹೇಳಿದರು.
ನನಗೆ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣನವರ ರಾಜಕೀಯ ಗುಣಗಳನ್ನು ಮೆಚ್ಚಿ, ನಾನು ಸಹ ಜನ ನಾಕನಾಗಬೇಕು ಎಂದು ನನ್ನ ಉದ್ಯೋಗವನ್ನು ತ್ಯಜಿಸಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಕಳೆದ 12 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾನೇ ಕಣಕ್ಕಿಳಿಯಬೇಕಿತ್ತು. ಅದರೆ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಎಸ್.ಶಂಕರಲಿಂಗೇಗೌಡರು ಬಿಜೆಪಿ ಬಿಟ್ಟು ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಯಿತು. ಕಾರಣಾಂತರಗಳಿಂದ ಅವರು ಸೋತರು. ಈ ಬಾರಿ ನನಗೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ಹೇಳಿದ್ದರು ಆದರೆ ಈಗ ನಿವೃತ್ತ ಕುಲಪತಿ ರಂಗಪ್ಪ ಅವರನ್ನು ಚಾಮರಾಜ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಬೇಸತ್ತು ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ನಾನು ಏನು ಎಂದು ತೋರಿಸುತ್ತೇನೆ ಎಂದು ಹೇಳಿದರು.
ಕಳೆದ 12 ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಆದರೆ ಏನು ಗೊತ್ತಿಲ್ಲದೆ ಕುಲಪತಿ ಸ್ಥಾನದಿಂದ ನಿವೃತ್ತಿ ಹೊಂದಿ ರಾಜಕೀಯದ ಗಂಧಗಾಳಿಯೆ ಗೊತ್ತಿಲ್ಲದ ರಂಗಪ್ಪ ಅವರಿಗೆ ಟಿಕೆಟ್ ನೀಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಕ್ಷೇತ್ರದಲ್ಲಿರು ಎಲ್ಲಾ ಸಮುದಾಯದವರು ನನಗೆ ಬೆಂಬಲ ನೀಡಿದ್ದಾರೆ. ನನ್ನ ನಿರೀಕ್ಷೆಗೂ ಮೀರಿ ಜನ ವಾರ್ಡ್‍ವಾರು ಸಭೆ ನಡೆಸುತ್ತಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ. ಈಗಾಗಲೇ 20 ವಾರ್ಡ್‍ಗಳಲ್ಲಿ ನನ್ನ ಅಭಿಮಾನಿಗಳು ಹಿತೈಷಿಗಳ ಸಭೆ ನಡೆಸಿದ್ದೇನೆ. ನಾಳೆಯಿಂದ ನಜರ್ ಬಾದ್‍ನಲ್ಲಿರುವ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಮನೆ ಮನೆಗೆ ಪಾದಯಾತ್ರೆ ತೆರಳುವುದಾಗಿ ಹೇಳಿದರು.
ನಾನು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನಗೆ ದೇವೇಗೌಡ, ರೇವಣ್ಣ ಹಾಗೂ ಕುಮಾರಸ್ವಾಮಿ ಅವರೇ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಪಕ್ಷದಲ್ಲಿರುವ ಕೆಲವರು ನಮ್ಮ ನಾಯಕರ ದಿಕ್ಕು ತಪ್ಪಿಸಿದರು. ನಾನು ಯಾರ ಹೆಸರನ್ನೂ ಪ್ರಸ್ಥಾಪ ಮಾಡುವುದಿಲ್ಲ. ನಾನು ತಾಯಿ ಚಾಮುಂಡೇಶ್ವರಿಯನ್ನು ನಂಬಿದ್ದೇನೆ. ನನಗೆ ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ನಂಜರಾಜೇಅರಸ್, ಸೇರಿದಂತೆ ಹಲವಾರು ಮುಖಂಡರು ಹಾಗು ಬೆಂಬಲಿಗರು ಉಪಸ್ಥಿತರಿದ್ದರು.







