ಉಡುಪಿ: ರಾಜಾಂಗಣದ ನೂತನ ವೇದಿಕೆ ಉದ್ಘಾಟನೆ

ಉಡುಪಿ, ಜ.20: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ ನಿರ್ಮಾಣಗೊಂಡ ನೂತನ ವೇದಿಕೆಯನ್ನು ಪರ್ಯಾಯ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀ ಉದ್ಘಾಟಿಸಿದರು.
ಪಲಿಮಾರು ಶ್ರೀ ತಮ್ಮ ಹಿಂದಿನ ಪರ್ಯಾಯ ಸಂದರ್ಭದಲ್ಲಿ ಕೃಷ್ಣ ಮಠದ ಪ್ರಾಕಾರದಲ್ಲಿ ನಿರ್ಮಿಸಿದ ಮರದ ದಳಿಯ ವಿನ್ಯಾಸವನ್ನು ಹಾಗೂ ಪ್ರಸ್ತುತ ಪರ್ಯಾಯದಲ್ಲಿ ನಿರ್ಮಿಸಲು ಸಂಕಲ್ಪಿಸಿರುವ ಸುವರ್ಣ ಗೋಪುರದ ವಿನ್ಯಾಸವನ್ನು ನೂತನ ವೇದಿಕೆ ಒಳಗೊಂಡಿದೆ.
ಶ್ರೀಕೃಷ್ಣ ಮಂದಿರದ ಗರ್ಭಗುಡಿಯನ್ನು ಹೋಲುವ ವೇದಿಕೆ ವಿನ್ಯಾಸವನ್ನು ಶೇಷಗಿರಿ ಕೆ.ಎಂ. ರೂಪಿಸಿದ್ದು, ಇದರ ಆಧಾರದಲ್ಲಿ ಅರುಣಕುಮಾರ್ ಹಾಗೂ ಸಿದ್ಧರಾಜು ಅವರು ವೇದಿಕೆಯನ್ನು ನಿರ್ಮಿಸಿದ್ದಾರೆ.
ವೇದಿಕೆಯನ್ನು ಹಾಗೂ ತಮ್ಮ ಪರ್ಯಾಯಾವಧಿಯಲ್ಲಿ ವಿದ್ವಾಂಸರಿಂದ ಪ್ರವಚನ ಮಾಲಿಕೆಯನ್ನು ಉದ್ಘಾಟಿಸಿದ ಪರ್ಯಾಯ ಶ್ರೀ ಮಾತನಾಡಿ, ಜ್ಞಾನದ ಗರ್ಭಗುಡಿ ಇಲ್ಲಿ ನಿರ್ಮಾಣಗೊಂಡಿದೆ. ಇದು ಜನರ ಮನಸ್ಸಿನ ಗರ್ಭಗುಡಿಗೆ ದಾಟಬೇಕಾಗಿದೆ. ಇದು ಜನರ ಮನಸ್ಸಿನ ಭಗವಂತನನ್ನು ಆರಾಧಿಸುವ ವೇದಿಕೆಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ವೇದಿಕೆಯ ನಿರ್ಮಾಣ ಮಾಡಿದ ಅರುಣಕುಮಾರ್, ಸಿದ್ಧರಾಜು ಹಾಗೂ ಇತರರನ್ನು ಅಲ್ಲದೇ, ಉದ್ಯಮಿ ಭುವನೇಂದ್ರ ಕಿದಿಯೂರು ಅವರನ್ನು ಸನ್ಮಾನಿಸಿದರು. ಬಳಿಕ ಹುಬ್ಬಳ್ಳಿಯ ವಿದ್ವಾಂಸ ಪ್ರದ್ಯುಮ್ನ ಜೋಶಿ ಆಚಾರ್ಯರಿಂದ ಪ್ರವಚನ ನಡೆಯಿತು.







